Home ಸ್ಥಳೀಯ ಸಮಾಚಾರ ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ ಉದ್ಘಾಟನೆ;  ಪ್ರತಿದಿನ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡುವುದರಿಂದ ಜೀವನ ಪಾವನವಾಗುತ್ತದೆ...

ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ ಉದ್ಘಾಟನೆ;  ಪ್ರತಿದಿನ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡುವುದರಿಂದ ಜೀವನ ಪಾವನವಾಗುತ್ತದೆ ಸುಬ್ರಹ್ಮಣ್ಯ ಶ್ರೀಗಳು

0

ಧರ್ಮಸ್ಥಳ: ಪ್ರತಿದಿನ ಬೆಳಿಗ್ಯೆ ಮತ್ತು ಸಂಜೆ ಕನಿಷ್ಠ ಒಂದು ಗಂಟೆಯಾದರೂ ನಾವು ಮನೆಯಲ್ಲಿ ಪರಿಶುದ್ಧ ತನು, ಮನ ಮತ್ತು ನಾಲಗೆಯಿಂದ ಶ್ರದ್ಧಾ-ಭಕ್ತಿಯಿಂದ ದೇವರ ಭಜನೆ ಮಾಡಿದರೆ ಜೀವನ ಪಾವನವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಪೂಜ್ಯ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ೨೮ನೇ ವರ್ಷದ ಭಜನಾ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಕಲಿಯುಗದಲ್ಲಿ ನಾವು ಅನ್ನ-ನೀರು ಬಿಟ್ಟು ತಪಸ್ಸು ಮಾಡಲು ಸಾಧ್ಯವಿಲ್ಲ. ಆದುದರಿಂದ ದೇವರು ಕೊಟ್ಟ ತನು, ಮನ, ನಾಲಗೆ ಮತ್ತು ವಿವೇಕವನ್ನು ಬಳಸಿ ಭಜನೆ ಮಾಡಿದಾಗ ಸುಖ-ಶಾಂತಿ, ನೆಮ್ಮದಿಯೊಂದಿಗೆ ಸಾರ್ಥಕ ಜೀವನ ನಡೆಸಲು ಸಾಧ್ಯವಾಗುತ್ತದೆ.
ಧರ್ಮಸ್ಥಳದ ಚರ್ತುದಾನ ಪರಂಪರೆಯನ್ನು ಉಳಿಸಿ, ಬೆಳೆಸುವುದರೊಂದಿಗೆ ಎಲ್ಲರ ಮನೆಗಳಲ್ಲಿ ಮತ್ತು ಮನಗಳಲ್ಲಿ ಭಜನಾ ಸಂಸ್ಕೃತಿ ಬಗ್ಯೆ ಅರಿವು, ಜಾಗೃತಿ ಹಾಗೂ ಉತ್ತಮ ಸಂಸ್ಕಾರದೊಂದಿಗೆ ಧರ್ಮಜಾಗೃತಿ ಕಾರ್ಯ ಮಾಡಿದ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆ ದಂಪತಿಯ ಸೇವಾಕಾರ್ಯವನ್ನು ಸ್ವಾಮೀಜಿ ಶ್ಲಾಘಿಸಿ ಅಭಿನಂದಿಸಿದರು.
ಭಜಕರು ಊರಿನ ಪ್ರಗತಿಯ ರೂವಾರಿಗಳಾಗಬೇಕು:
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಇಲ್ಲಿ ತರಬೇತಿ ಪಡೆದ ಭಜನಾಪಟುಗಳು ಆಯಾ ಊರಿನ ಪ್ರಗತಿಯ ರೂವಾರಿಗಳಾಗಬೇಕು. ಆದರ್ಶ ನಾಯಕರಾಗಿ ಊರಿನ ಪ್ರಗತಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿ, ಮಕ್ಕಳಿಗೂ ಭಜನಾ ಸಂಸ್ಕೃತಿ ಕೊಡಬೇಕು ಎಂದು ಹೇಳಿದರು.
ಮಾಣಿಲದ ಮೋಹನದಾಸ ಸ್ವಾಮೀಜಿ ಶುಭ ಹಾರೈಸಿದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ನಿಶ್ಚಲ್ ಕುಮಾರ್, ಐಶ್ವರ್ಯ ನಿಶ್ಚಲ್ ಕುಮಾರ್ ಉಪಸ್ಥಿತರಿದ್ದರು.
ವಿದೂಷಿ ಚೈತ್ರಾ ಭಟ್ ಧರ್ಮಸ್ಥಳ ಮತ್ತು ಬಳಗದವರ ನೃತ್ಯ ಪ್ರದರ್ಶನ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು.
ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿದರು. ದ.ಕ.ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಧನ್ಯವಾದವಿತ್ತರು.
ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು.
ಡಾ. ಶಶಿಕಾಂತ ಜೈನ್‌ರಿಂದ ಶಾಂತಿಮಂತ್ರ ಪಠಣದೊಂದಿಗೆ ಸಮಾರಂಭ ಸಮಾಪನಗೊಂಡಿತು.
೧೨೩ ಭಜನಾ ಮಂಡಳಿಗಳಿಂದ ೨೦೪ ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version