Home ಸ್ಥಳೀಯ ಸಮಾಚಾರ ಪಿಲಿಗೂಡು – ಉಪ್ಪಿನಂಗಡಿ ರಸ್ತೆ ಅವ್ಯವಸ್ಥೆ : ಕುಪ್ಪೆಟ್ಟಿ ನಾಗರಿಕ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ

ಪಿಲಿಗೂಡು – ಉಪ್ಪಿನಂಗಡಿ ರಸ್ತೆ ಅವ್ಯವಸ್ಥೆ : ಕುಪ್ಪೆಟ್ಟಿ ನಾಗರಿಕ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ

0

ಬೆಳ್ತಂಗಡಿ: ಕಳೆದ ಮೂರ್ನಾಲ್ಕು ವರ್ಷಗಳಿಂದ ತೀವ್ರ ಅವ್ಯವಸ್ಥೆಗೊಂಡಿರುವ ಗುರುವಾಯನಕೆರೆ – ಉಪ್ಪಿನಂಗಡಿಯ ರಾಜ್ಯ ಹೆದ್ದಾರಿಯ, ಪಿಲಿಗೂಡು-ಕುಪ್ಪೆಟ್ಟಿ-ಉಪ್ಪಿನಂಗಡಿ ರಸ್ತೆಗೆ ಶೀಘ್ರವಾಗಿ ಸಂಪೂರ್ಣ ಡಾಮರೀಕರಣ ಮಾಡಲು ಒತ್ತಾಯಿಸಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳನ್ನು ಕುಪ್ಪೆಟ್ಟಿ ನಾಗರಿಕ ಹೋರಾಟ ಸಮಿತಿಯು ಭೇಟಿ ನೀಡಿ ಮಾತುಕತೆ ನಡೆಸಿತು.
ಕಳೆದ ವಾರ ನೂರಾರು ನಾಗರಿಕರ ಉಪಸ್ಥಿತಿಯಲ್ಲಿ ನಡೆದ ಪ್ರತಿಭಟನೆ ಬಗ್ಗೆ, ಮನವರಿಕೆ ಮಾಡಿಕೊಟ್ಟು, ಜಾತಿ ಧರ್ಮ ಪಕ್ಷ ಭೇದವಿಲ್ಲದೆ ಸರ್ವ ನಾಗರಿಕರು ರಸ್ತೆ ಅವ್ಯವಸ್ಥೆಯಿಂದ ಆಕ್ರೋಶಿತರಾಗಿದ್ದು, ರಸ್ತೆ ಬಂದ್ ಮಾಡಲು ಮುಂದಾಗಿದ್ದಾರೆ. ಅಂದು ನಡೆದ ಪ್ರತಿಭಟನೆಯಲ್ಲಿ ರಸ್ತೆ ಕಾಮಗಾರಿ ಆರಂಭಿಸಲು ನವೆಂಬರ್- 16 ರ ಗಡುವು ನೀಡಲಾದ ಬಗ್ಗೆಯೂ, 17 ರಂದು ಸಂಪೂರ್ಣ ರಸ್ತೆ ಬಂದ್ ಮಾಡುವ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಇದೇ ವೇಳೆ ಚರ್ಚಿಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು ರಸ್ತೆ ಅವ್ಯವಸ್ಥೆಯಿಂದ ರೋಸಿ ಹೋದ ಜನ ಸಾಮಾನ್ಯರಿಗೆ ರಸ್ತೆ ಬಂದ್ ನಿಂದ ಮತ್ತಷ್ಟು ಸಮಸ್ಯೆ ತಲೆದೋರುವ ಕಾರಣ ಬಂದ್ ಕೈ ಬಿಡುವ ಬಗ್ಗೆ ಆಲೋಚಿಸಲು ನಿಯೋಗದೊಂದಿಗೆ ಸೂಚಿಸಿದರು. ತಕ್ಷಣವೇ ಕಾಮಗಾರಿ ಪ್ರಾರಂಭಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಮಾಡುವುದಾಗಿಯೂ ತಿಳಿಸಿದರು.

ಜಿಲ್ಲಾಧಿಕಾರಿ ಭೇಟಿ ಬಳಿಕ ಹೇಳಿಕೆ ನೀಡಿದ ನಾಗರಿಕ ಹೋರಾಟ ಸಮಿತಿ ನಾಯಕರು, ರಸ್ತೆಯ ಶೀಘ್ರವಾದ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಸಂಪೂರ್ಣ ಅವ್ಯವಸ್ಥೆಗೊಂಡ ರಸ್ತೆಯ ಗಂಭೀರತೆಯ ಬಗ್ಗೆ ಮಾಹಿತಿ ನೀಡಿದ್ದೇವೆ. ಇದೀಗ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಲಭಿಸಿದ ಮಾಹಿತಿಯಂತೆ, ನಾಗರಿಕ ಹೋರಾಟ ಸಮಿತಿಯು ನೀಡಿದ ನವೆಂಬರ್ 16 ರ ಗಡುವಿನಂದೇ ಡಾಮರೀಕರಣ ಆರಂಭವಾಗಲಿದೆ. ಅಲ್ಲದೆ ಶೀಘ್ರವಾಗಿ ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಇಲಾಖೆಯ ಸಚಿವರನ್ನು ನಾಗರಿಕ ಹೋರಾಟ ಸಮಿತಿಯು ಭೇಟಿ ನೀಡಿ ಮಾತುಕತೆ ನಡೆಸಲಿದ್ದೇವೆ. ಎಂದು ತಿಳಿಸಿದ್ದಾರೆ.

ನಿಯೋಗದಲ್ಲಿ ನಾಗರಿಕ ಹೋರಾಟ ಸಮಿತಿ ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಬಂಡಸಾಲೆ ಕುಪ್ಪೆಟ್ಟಿ, ಪ್ರಧಾನ ಕಾರ್ಯದರ್ಶಿ ಎನ್. ಎಂ. ಶರೀಫ್ ಸಖಾಫಿ ನೆಕ್ಕಿಲ್, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಬಿ ಮುಹಮ್ಮದ್ ಅಲೀ ತುರ್ಕಳಿಕೆ, ಸಂಚಾಲಕರಾದ ಅಬ್ದುರ್ರಹ್ಮಾನ್ ಪದ್ಮುಂಜ, ಖಾಸಗಿ ಬಸ್ ಮಾಲಕ ಚಾಲಕ ಸಂಘದ ಜಿಲ್ಲಾ ಕೋಶಾಧಿಕಾರಿಯಾದ ಇಲ್ಯಾಸ್ ಕರಾಯ, ಭೀಮ್ ಆರ್ಮಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷರಾದ ಅಣ್ಣು ಸಾಧನ ಪದ್ಮುಂಜ ಮೊದಲಾದವರು ಇದ್ದರು‌

NO COMMENTS

LEAVE A REPLY

Please enter your comment!
Please enter your name here

Exit mobile version