ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ರೆಖ್ಯಾ ಗ್ರಾಮದ ರಾ.ಹೆ.ಯಲ್ಲಿ 2017 ರಲ್ಲಿ ಲಾರಿ ತಡೆದು ನಡೆಸಿದ ದರೋಡೆ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎರಡನೇ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ:65/2017 ಕಲಂ, 397, 395 ಜೊತೆಗೆ 34 ಐಪಿಸಿ (ರೆಖ್ಯಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಅಡ್ಡಗಟ್ಟಿ ದರೋಡೆ ನಡೆಸಿದ) ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ A-2 ವಾರಂಟ್ ಆರೋಪಿ ಬೆಂಗಳೂರು ಬನಶಂಕರಿ ನಿವಾಸಿ ಮಣಿ @ ಮಣಿಕಂಠ (32) ಎಂಬಾತನನ್ನು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ ಆರ್ ಗಾಣಿಗೇರ ನೇತೃತ್ವದ ಸಿಬ್ಬಂದಿ ವೃಷಭ ಮತ್ತು ಚರಣ್ ರಾಜ್ ರವರುಗಳು ಬೆಂಗಳೂರಿನ ಬನಶಂಕರಿ ಮಾರ್ಕೆಟ್ ಬಳಿ ಎ.26 ರಂದು ಖಚಿತ ಮಾಹಿತಿ ಮೇರೆಗೆ ಬಂಧಿಸಿ ಎ.27 ರಂದು ಮಾನ್ಯ ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.







