Home ಅಪರಾಧ ಲೋಕ ಮಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳವು‌ ಜಾಲ ಪತ್ತೆ: ಮೂವರು ಬಾಲಕರು ಸೇರಿದಂತೆ 7 ಆರೋಪಿಗಳ ಪತ್ತೆ,...

ಮಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳವು‌ ಜಾಲ ಪತ್ತೆ: ಮೂವರು ಬಾಲಕರು ಸೇರಿದಂತೆ 7 ಆರೋಪಿಗಳ ಪತ್ತೆ, ₹4.50 ಲಕ್ಷ ಮೌಲ್ಯದ 9 ವಾಹನ ವಶ

0
2

ಮಂಗಳೂರು: ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಜಾಲ ಪತ್ತೆ ಹಚ್ಚಿರುವ ಮಂಗಳೂರು ನಗರ ದಕ್ಷಿಣ ಪೊಲೀಸರು, ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಮೂವರು ಬಾಲಕರು ಸೇರಿದಂತೆ ಒಟ್ಟು ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಕಳವು ಮಾಡಲಾಗಿದ್ದ ಆರು ದ್ವಿಚಕ್ರ ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ವಾಹನಗಳು ಸೇರಿದಂತೆ ಒಟ್ಟು ಒಂಬತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ ₹4.50 ಲಕ್ಷವಾಗಿದೆ.
ಬಂಧಿತ ಆರೋಪಿಗಳು ಮಹಮ್ಮದ್ ಸಿಯಾಮ್ ಶಿವನಗರ, ಮೂಡುಶೆಡ್ಡೆ ವಾಮಂಜೂರು. ಮುಹಮ್ಮದ್ ನಾಸೀಫ್ @ ನಸೀಫ್ ಜೋಕಟ್ಟೆ. ಮೊಹಮ್ಮದ್ ರಾಹೀಲ್‌, ಶಿವನಗರ, ಮೂಡುಶೆಡ್ಡೆ. ನಿಖಿಲ್, ಸದಾಶಿವ ನಗರ, ತಿರುವೈಲು, ಕುಟ್ಟಿ ಪಲ್ಕೆ. ಎಂಬವರಾಗಿದ್ದಾರೆ ಇನ್ನು ಮೂರು ಮಂದಿ ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕರಾಗಿದ್ದಾರೆ.
ಮಂಗಳೂರು ನಗರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ದ್ವಿಚಕ್ರ ವಾಹನ ಕಳವು ಪ್ರಕರಣಗಳು ದಾಖಲಾಗಿದ್ದವು. ವೆಲೆನ್ಸಿಯಾ ಜಂಕ್ಷನ್‌ನ ಡಾನ್ ಬಾಸ್ಕೋ ಹಾಸ್ಟೆಲ್ ಬಳಿ, ಜಪ್ಪು ಮಾರ್ಕೆಟ್, ಅತ್ತಾವರದ ಕೆಎಂಸಿ ಆಸ್ಪತ್ರೆ ಬಳಿಯ ದುರ್ಗಾ ಹೋಟೆಲ್ ಮುಂಭಾಗ ಹಾಗೂ ಹೊಯಿಗೆ ಬಜಾರ್‌ನ ಭಗವತಿ ಅಪಾರ್ಟ್‌ಮೆಂಟ್ ಕೆಳಗೆ ನಿಲ್ಲಿಸಿದ್ದ ಬೈಕ್‌ಗಳನ್ನು ಕಳವು ಮಾಡಲಾಗಿತ್ತು. ಇದೇ ರೀತಿ, ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಬಳಿ ಹಾಗೂ ಕುತ್ತಾರ್ ಪಂಡಿತ್ ಹೌಸ್ ಸಮೀಪ ನಿಲ್ಲಿಸಿದ್ದ ಬೈಕ್‌ಗಳೂ ಕಳವಾಗಿದ್ದವು.
ಪ್ರಕರಣಗಳ ತನಿಖೆಗಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹಾಗೂ ಅಪರಾಧ ಪತ್ತೆ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡವು ತನಿಖೆ ನಡೆಸಿ ಮಾಹಿತಿ ಸಂಗ್ರಹಿಸುವ ಮೂಲಕ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ವಿಚಾರಣೆ ವೇಳೆ, ಆರೋಪಿಗಳು ಬೆಲೆಬಾಳುವ ಮೋಟಾರ್ ಸೈಕಲ್‌ಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಸರಗಳ್ಳತನ ಸೇರಿದಂತೆ ಇತರ ಅಪರಾಧಗಳ ಮೂಲಕ ಹಣ ಗಳಿಸಿ ಐಷಾರಾಮಿ ಜೀವನ ನಡೆಸುವ ಉದ್ದೇಶ ಹೊಂದಿದ್ದರು ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಆರೋಪಿಗಳ ಬಂಧನ
ಏಳು ಮಂದಿಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಮೂವರು ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕರಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಘವೇಂದ್ರ ಬೈಂದೂರು ಅವರ ನೇತೃತ್ವದಲ್ಲಿ ಪಿಎಸ್‌ಐ ಮಾರುತಿ ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಪುಟ್ಟರಾಮ್, ಸಾಗರ ದೇವಕತ್ತಿ ಮತ್ತು ಆಂಜನೇಯ ಕೆ.ಎಸ್. ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಠಾಣೆಯ ಇತರ ಅಧಿಕಾರಿ ಹಾಗೂ ಸಿಬ್ಬಂದಿ ಸಹಕರಿಸಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here