Home ಅಪರಾಧ ಲೋಕ ಮಂಗಳೂರು; ಪಿಕಪ್ ವಾಹನದಿಂದ ಸ್ಕೂಟರಿಗೆ ಡಿಕ್ಕಿ ಹೊಡೆಸಿ ಇಬ್ಬರು ಯುವಕರಕೊಲೆ ಆರೋಪ; ಆರೋಪಿ ವಿರುದ್ದ ಕೊಲೆ...

ಮಂಗಳೂರು; ಪಿಕಪ್ ವಾಹನದಿಂದ ಸ್ಕೂಟರಿಗೆ ಡಿಕ್ಕಿ ಹೊಡೆಸಿ ಇಬ್ಬರು ಯುವಕರಕೊಲೆ ಆರೋಪ; ಆರೋಪಿ ವಿರುದ್ದ ಕೊಲೆ ಪ್ರಕರಣ ದಾಖಲು

0
3

ಮಂಗಳೂರು: ಬೋಳಿಯಾರು ಸಮೀಪದ ಇಂಡಿಯನ್ ಆಯಿಲ್
ಪೆಟ್ರೋಲ್ ಪಂಪ್ ಬಳಿ ಸ್ಕೂಟರ್‌ಗೆ ಪಿಕಪ್ ವಾಹನದಿಂದ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿ ಇಬ್ಬರು ಯುವಕರ ಸಾವಿಗೆ ಕಾರಣವಾದ ಆರೋಪದಡಿ ಪಿಕಪ್ ಚಾಲಕನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಝುನೈದ್ ಕಲ್ಲಾಪುವಿನ ಗ್ಲೋಬಲ್ ಮಾರ್ಕೆಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಅಕ್ಟೋಬರ್ 19ರಂದು ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಊಟದ ಬಳಿಕ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಸ್ನೇಹಿತ ಅಫ್ರಾಝ್ ಜೊತೆ ಸ್ಕೂಟರ್‌ನಲ್ಲಿ ತೆರಳಿದ್ದರು.

ಸಂಜೆ ಸುಮಾರು 4 ಗಂಟೆಗೆ ರಂತಡ್ಕ ಕ್ರಾಸ್ ಬಳಿ ಇಬ್ಬರು ಯುವಕರು ಮತ್ತು ಸ್ಥಳೀಯ ನಿವಾಸಿ, ಪಿಕಪ್ ಚಾಲಕ ಹಫೀಜ್ ಅಲಿಯಾಸ್ ಅಪ್ಪಿ ನಡುವೆ ಯಾವುದೋ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಹೊಡೆದಾಟವಾಗಿತ್ತು ಎನ್ನಲಾಗಿದೆ. ಬಳಿಕ ಝುನೈದ್ ಮತ್ತು ಅಫ್ರಾಝ್ ಸ್ಕೂಟರ್‌ನಲ್ಲಿ ಮುಡಿಪಿನ ಕಡೆಗೆ ತೆರಳಿದ್ದರು.

ಈ ವೇಳೆ ಹಫೀಜ್ ತನ್ನ ಪಿಕಪ್ ವಾಹನದಲ್ಲಿ ಅವರನ್ನು ಹಿಂಬಾಲಿಸಿಕೊಂಡು ಹೋಗಿ, ಬೋಳಿಯಾರಿನ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಸಮೀಪ ಸ್ಕೂಟರ್‌ನ ಹಿಂಭಾಗಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟ‌ರ್ ರಸ್ತೆಗೆ ಉರುಳಿಬಿದ್ದಿದ್ದು, ಸಮೀಪದಲ್ಲಿದ್ದ ವಿದ್ಯುತ್ ಕಂಬವೂ ಮುರಿದುಬಿದ್ದಿದೆ. ಸ್ಕೂಟರ್‌ನಿಂದ ರಸ್ತೆಗೆ ಎಸೆಯಲ್ಪಟ್ಟ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದವು.

ಘಟನೆಯ ಬಳಿಕ ಆರೋಪಿ ಚಾಲಕ ಹಾನಿಗೊಳಗಾದ ಪಿಕಪ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಝುನೈದ್ ಅವರನ್ನು ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಹಾಗೂ ಅಫ್ರಾಝ್ ಅವರನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.

ಆರಂಭದಲ್ಲಿ ರಸ್ತೆ ಅಪಘಾತದಂತೆ ಕಂಡಿದ್ದ ಈ ಘಟನೆ, ಸ್ಥಳೀಯ ಪ್ರತ್ಯಕ್ಷದರ್ಶಿಗಳ ಮಾಹಿತಿಯ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ನಡೆದ ಕೃತ್ಯವೇ ಎಂಬ ಅನುಮಾನಕ್ಕೆ ಕಾರಣವಾಗಿದೆ
ಮಂಗಳೂರು ನಗರ ಪೊಲೀಸ್ ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ ಅವರು, ಘಟನೆಯ ಸಂದರ್ಭಗಳನ್ನು ಗಮನಿಸಿದರೆ ಕೊಲೆಯಂತೆ ಕಂಡುಬರುತ್ತಿದ್ದು, ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ವಿವರವಾದ ತನಿಖೆಯಿಂದ ಹೆಚ್ಚಿನ ಸಂಗತಿಗಳು ಬಹಿರಂಗವಾಗಲಿವೆ ಎಂದು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ಅ.ಕ್ರ. 112/2026ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ಹಫೀಜ್ ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here