
ಬೆಳ್ತಂಗಡಿ; ಇಂದು ನಮ್ಮ ದೇಶವನ್ನು ಆಳುತ್ತಿರುವ ನರೇಂದ್ರ ಮೋದಿ ಸರಕಾರ ಅತಿ ಭ್ರಷ್ಟ ಸರಕಾರವಾಗಿದ್ದು, ಇಂತಹ ಭ್ರಷ್ಟ ಮತ್ತು ಕಾರ್ಮಿಕ ವಿರೋದಿ ಸರಕಾರವನ್ನು ಹಿಮ್ಮೆಟ್ಟಿಸುವುದು ಭಾರತೀಯರ ಇಂದಿನ ಕರ್ತವ್ಯವಾಗಿದ್ದು ಆ ಮೂಲಕ ರೈತರ, ಕಾರ್ಮಿಕರ ಬದುಕಿನ ರಕ್ಷಣೆ ಮಾಡಬೇಕಾದ್ದು ಇಂದಿನ ಅತೀ ಅಗತ್ಯ ಕೆಲಸವಾಗಿದೆ ಎಂದು ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳ ಸದಸ್ಯರಾದ ಡಾ.ಕೃಷ್ಣಪ್ಪ ಕೊಂಚಾಡಿ ಹೇಳಿದರು.
ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಸಿಪಿಐ(ಎಂ) ಬೆಳ್ತಂಗಡಿ ತಾಲೂಕು 10 ನೇ ಸಮ್ಮೇಳನವನ್ನು ಉದ್ಗಾಟಿಸಿ ಮಾತಾಡುತ್ತಿದ್ದರು. ಕೇವಲ ಅಟೋದಲ್ಲಿ ಜನ ತಂದು ಹೋರಾಟ ನಡೆಸುತ್ತಿದ್ದ ಶ್ರೀಲಂಕದಲ್ಲೇ ಜನ ಇಂದು ಕಮ್ಯೂನಿಸ್ಟ್ ರನ್ನು ಗೆಲ್ಲಿಸಿ ಬದಲಾವಣೆ ತಂದಿದ್ದಾರೆ. ಅದೇ ರೀತಿ ಭಾರತದಲ್ಲೂ ಜನ ಬದಲಾವಣೆ ಬಯಸುತ್ತಾರೆ ಮತ್ತು ಬದಲಾವಣೆ ಮಾಡುತ್ತಾರೆ. ದುಡಿಯುವ ವರ್ಗದ ವಿರೋದಿ ಸರಕಾರವನ್ನು, ಮತೀಯ ಸರಕಾರವನ್ನು, ಶೋಷಕ ವರ್ಗದ ಹಿತಕಾಪಾಡುವ ಸರಕಾರವನ್ನು ಹಿಮ್ಮೆಟ್ಟಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಸಮಾರೋಪ ಭಾಷಣ ಮಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮುನೀರ್ ಕಾಟಿಪಳ್ಳ ಮಾತಾಡುತ್ತಾ, ಜಿಲ್ಲೆಯ ಕೋಮುವಾದಿ ಶಕ್ತಿಗಳ ವಿರುದ್ದ ನಿರಂತರ ಸಮರ ಸಾರುವವರು ನಾವು ಕಮ್ಯೂನಿಸ್ಟರೂ ಮಾತ್ರ ಎಂದರು. ನಮ್ಮ ಪಕ್ಷದ ಬಲವರ್ದನೆಯೇ ಜಿಲ್ಲೆಯ ಜನರ ಬದುಕಿನ ಅಭಿವೃದ್ದಿಯ ಬದಲಾವಣೆಗೆ ಇರುವ ಏಕೈಕ ಬೆಳಕಿನ ದಾರಿಯಾಗಿದೆ. ನಾವು ಜಿಲ್ಲೆಯಲ್ಲಿ ಒಂದು ನಿರ್ಣಾಯಕ ಶಕ್ತಿಯಾಗಿದ್ದು ಹಲವು ಕಾರ್ಯಕ್ರಮಗಳನ್ನು ನಡೆಸಿ ಕೆಲವು ಕೋಮುವಾದಿ ಶಕ್ತಿಗಳ ಹಾಗೂ ಖಾಸಗೀ ಬಂಡವಾಳಿಗರ ಸರ್ವಾದಿಕಾರಿ ನಡೆಯನ್ನು ಹಿಮ್ಮೆಟ್ಟಿಸಲು ಮತ್ತು ಜನರ ಮೆಚ್ಚುಗೆ ಗಳಿಸಲು ನಮಗೆ ಸಾದ್ಯವಾಗಿದೆ ಎಂದರು.

ಉದ್ಘಾಟನಾ ಸಭೆಯ ಅದ್ಯಕ್ಷತೆಯನ್ನು ಶ್ಯಾಮರಾಜ್ ವಹಿಸಿದ್ದರು. ಸಮ್ಮೇಳನದ ಧ್ವಜಾರೋಹಣ ನೆರವೇರಸಿದ ಕಾಂ. ಲಕ್ಷ್ಮಣ ಗೌಡ, ತಾಲೂಕು ಮುಖಂಡರುಗಳಾದ ಬಿ.ಎಂ.ಭಟ್, ಜಯರಾಮ ಮಯ್ಯ, ಈಶ್ವರಿ, ನೆಬಿಸಾ, ಧನಂಜಯ ಗೌಡ, ಲೋಕೇಶ್ ಕುದ್ಯಾಡಿ ಮೊದಲಾದವರು ವೇದಿಕೆಯಲ್ಲಿದ್ದರು. ಇಎಂಎಸ್ ಭವನದಿಂದ ಅಂಬೇಡ್ಕರ್ ಭವನದ ವರೆಗೆ ಪಕ್ಷದ ಪ್ರತಿನಿದಿಗಳು, ಪಕ್ಷದ ಸದಸ್ಯರು, ಹಿತೈಷಿಗಳು ಮೆರವಣಿಗೆ ನಡೆಸಿದರು. ರೈತರ ಭೂಮಿಯ ಉಚಿತ ಪ್ಲಾಟಿಂಗ್, ಅರಣ್ಯ ಹಕ್ಕು ಕಾಯ್ದೆಗೆ 3 ತಲೆಮಾರು ನಿರ್ಬಂದ ತೆಗೆದು ತಿದ್ದುಪಡಿ ಮಾಡಿ ಅರಣ್ಯವಾಸಿಗಳ ರಕ್ಷಣೆ, ಕಸ್ತೂರಿ ರಂಗನ್ ವರದಿ ತಿರಸ್ಕಾರ, ಅರ್ಜಿ ನೀಡಿದ ರೈತರಿಗೆ ಅಕ್ರಮ-ಸಕ್ರಮದ ಹಕ್ಕುಪತ್ರ, ಅಡಿಕೆ ಆಮದು ನಿಷೇದಿಸಿ ಅಡಿಕೆ ಬೆಳೆಗಾರರ ರಕ್ಷಣೆ, ಬೀಡಿ ಕಾರ್ಮಿಕರ 6 ವರ್ಷದ ವೇತನ ಹಾಗೂ 3 ವರ್ಷದ ಡಿಎ ಬಾಕಿ ಒಟ್ಟು ಬಾಕಿ ತಲಾ ರೂ.60,000 /- ವೇತನವನ್ನು ಬೀಡಿ ಕಾರ್ಮಿಕರಿಗೆ ತಕ್ಷಣ ಪಾವತಿಸಲು ಸರಕಾರದ ಮದ್ಯಪ್ರವೇಶಕ್ಕೆ ಆಗ್ರಹ, ಬೀಡಿ ಕಾರ್ಮಿಕರ ಗ್ರಾಚ್ಯುವಿಟಿ ನೀಡದ ಬೀಡಿ ಮಾಲಕರ ಮೇಲೆ ಕಠಿಣ ಕ್ರಮ, ಕುತ್ಲೂರು ಮಲೆಗೆ ಹೋಗುವ ರಸ್ತೆಯ ಮದ್ಯೆ ಮುರಿದ ಸೇತುವೆ ಪುನಃ ನಿರ್ಮಾಣ, ರೈತರಿಗೆ ಮನೆ ನಿರ್ಮಿಸಲು 9- 11 ನಿಂದ ವಿನಾಯತಿ., ಪುಂಜಾಲಕಟ್ಟೆ-ಚಾರ್ಮಾಡಿ ಚತುಷ್ಪತಿ ಹೆದ್ದಾರಿ ರಸ್ತೆಯನ್ನು ಶೀಘ್ರ ನಿರ್ಮಾಣಕ್ಕೆ ಆಗ್ರಹ, ಕಟ್ಟಡ ಕಾರ್ಮಿಕರ ಸವಲತ್ತುಗಳ ಬಿಡುಗಡೆಗೆ, ನೊಂದಣಿ, ನವೀಕರಣಕ್ಕಿರುವ ನಿರ್ಬಂಧ ಸಡಿಲಿಸಲು, ಸಿಐಟಿಯುಗೆ ಮಂಡಳಿಯಲ್ಲಿ ಪ್ರಾತಿನಿಧ್ಯ ನೀಡಲು ಒತ್ತಾಯ, ಕಾಂಞಗಾಡ್-ಪುತ್ತೂರು, ಧರ್ಮಸ್ಥಳ, ಬೆಳ್ತಂಗಡಿ ಮೂಡಬಿದ್ರೆ, ಉಡುಪಿ ರೈಲ್ವೇ ಮಾರ್ಗ ನಿರ್ಮಾಣಕ್ಕೆ ಒತ್ತಾಯ, ಸ್ವಸಹಾಯ ಗುಂಪುಗಳ ಹಾಗೂ ಮೈಕ್ರೋಪೈನಾನ್ಸ್ ಸಾಲಗಳು ಕಾನೂನು ಬದ್ದ ಕಾರ್ಯನಿರ್ವಹಣೆ ನಡೆಸಲು ಸೂಚಿಸಿ ಗೂಂಡಾಗಿರಿ ತಡೆದು ಬಡವರ ರಕ್ಷಿಸಲು ಒತ್ತಾಯ, ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೆ ಬಾಕಿ ವೇತನ ಪಾವತಿಸಲು ಮತ್ತು ಕನಿಷ್ಟ ವೇತನ ಜಾರಿಗೆ ಆಗ್ರಹ, ಸೇರಿದಂತೆ ಕೆಲವು ಪ್ರಮುಖ ನಿರ್ಣಯಗಳನ್ನು ಸಮ್ಮೇಳನ ಅಂಗೀಕರಿಸಿತು. ಕೊನೆಗೆ ನೂತನ ತಾಲೂಕು ಸಮಿತಿ ರಚಿಸಲಾಯಿತು ನೂತನ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ವಂದಿಸಿದರು.
