ಬೆಂಗಳೂರು: ಲೈಂಗಿಕ ದೌರ್ಜನ್ಯ ಅಶ್ಲೀಲ ವಿಡಿಯೋ, ಪೆನ್‌ಡ್ರೈವ್ ಸೇರಿ ಮೂರು ಪ್ರಕರಣಗಳ ಸಂಬಂಧ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಗುರುವಾರ ಮಧ್ಯರಾತ್ರಿಗೆ ಬೆಂಗಳೂರಿಗೆ ಆಗಮಿಸಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ವಿಶೇಷ ತನಿಖಾ ದಳ(ಎಸ್‌ಐಟಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಲೋಕಸಭಾ ಚುನಾವಣೆಯ ದಿನ (ಎ.26)ದಂದು ಮತ
ಚಲಾಯಿಸಿ ಎ.27ರ ಬೆಳಗ್ಗೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದ ಸಂಸದ ಪ್ರಜ್ವಲ್ ರೇವಣ್ಣ ಬರೋಬ್ಬರಿ 34 ದಿನಗಳ ಬಳಿಕ ರಾಜ್ಯಕ್ಕೆ ವಾಪಸ್ಸಾಗಿದ್ದಾರೆ. ಮೇ 30ರ ಮಧ್ಯಾಹ್ನದ ವೇಳೆಗೆ ಜರ್ಮನಿಯ ಮ್ಯೂನಿಕ್ ನಗರದಿಂದ ಲುಫ್ತಾನ್ನಾ ಏರ್ ಲೈನ್ಸ್ ಮೂಲಕ ಟಿಕೆಟ್
ಬುಕ್ ಮಾಡಿಕೊಂಡು ಪ್ರಯಾಣ ಬೆಳೆಸಿದ್ದು, ಮಧ್ಯರಾತ್ರಿ12.30ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ
ಸಾಧ್ಯತೆ ಇದ್ದರಿಂದ ಅವರನ್ನು ಬಂಧಿಸಲು ಎಸ್‌ಐಟಿ ಅಧಿಕಾರಿಗಳ ತಂಡ ವಿಮಾನ ನಿಲ್ದಾಣದಲ್ಲಿಯೇ
ಮೊಕ್ಕಾಂ ಹೂಡಿತ್ತು.
ಪ್ರಜ್ವಲ್ ರೇವಣ್ಣ ಬಂಧನದೊಂದಿಗೆ ಪ್ರಕರಣದ ತನಿಖೆಗೆ ಇನ್ನಷ್ಟು ವೇಗ ಸಿಗುವ ಸಾಧ್ಯತೆಯಿದೆ. ಜಗತ್ತೇ ಬೆಚ್ಚಿ ಬೀಳುವಂತೆ ಮಾಡಿದ ಈ ಲೈಂಗಿಕ ದೌರ್ಜನ್ಯ ಪ್ರಕರಣ ರಾಜ್ಯದ ರಾಜಕೀಯವನ್ನು ಸಂಪೂರ್ಣವಾಗಿ ಅಲ್ಲೋಲ ಕಲ್ಲೋಲಗೊಳಿಸಿತ್ತು. ಪ್ರಜ್ವಲ್ ಪೊಲೀಸರ ಕೈಗೆ ಸಿಕ್ಕಿದ ಬಳಿಕ ಇನ್ನು ಯಾವೆಲ್ಲ ಹೊಸ ವಿಚಾರಗಳು ಹೊರಬೀಳಲಿದೆ ಎಂದು ಕಾದು ನೋಡಬೇಕಾಗಿದೆ
