ಬೆಳ್ತಂಗಡಿ; ಪಟ್ಟಣದ ವ್ಯಾಪ್ತಿಯಲ್ಲಿ ಬಹಳಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಾಯೋಜನೆಗೆ ಕಡೆಗೂ ತಾತ್ಕಾಲಿಕವಾಗಿ ಪಟ್ಟಣ ಪಂಚಾಯತು ಅನುಮೋದನೆ ನೀಡಿದೆ.
ಫೆ.1 ರಂದು ಆಡಳಿತಾಧಿಕಾರಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪರವಿರೋಧ ಚರ್ಚೆಯ ನಡಯವೆಯೂ ಕಡೆಗೂ ತಾತ್ಕಾಲಿಕವಾಗಿ ಮಹಾಯೋಜನೆಯನ್ನು ಮಂಜೂರು ಮಾಡಲಾಯಿತು.
ಭವಿಷ್ಯದಲ್ಲಿ ಪಟ್ಟಣಕ್ಕೆ ವ್ಯವಸ್ಥಿತ ಸವಲತ್ತು ಒದಗಿಸುವ ದೃಷ್ಟಿಕೋನದಡಿ ನಗರದಂತೆ ಬೆಳ್ತಂಗಡಿ ಪಟ್ಟಣದ ವ್ಯಾಪ್ತಿಗೂ ಮಹಾ ಯೋಜನೆ ಜಾರಿಗೊಳಿಸುವ ಸಲುವಾಗಿ ಮಂಗಳೂರು ಯೋಜನಾ ಪ್ರಾಧಿಕಾರದಿಂದ ನೀಲಿ ನಕಾಶೆ ತಯಾರಿಸಲಾಗಿತ್ತು. ಆದರೆ ಜನರಿಗೆ ಇದರಿಂದ ಸಮಸ್ಯೆ ಎದುರಾಗುತ್ತಿದೆ ಎಂಬ ಕಾರಣ ನೀಡಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ತೀವ್ರ ವಿರೋಧದಿಂದ ಪಟ್ಟಣದ ವ್ಯಾಪ್ತಿಯಲ್ಲಿ ಮಹಾಯೋಜನೆಗೆ ಒಪ್ಪಿಗೆ ದೊರೆತಿರಲಿಲ್ಲ. ಇದೀಗ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಪಾರಿತೋಷ್ ನಾಯಕ್ ಅವರು ಮಾಹಿತಿ ನೀಡಿ, ಸ್ಥಳೀಯ ಯೋಜನಾ ಪ್ರದೇಶಕ್ಕೆ ಸರಕಾರದ ಅನುಮೋದನೆ ಪಡೆಯುವ ಸಲುವಾಗಿ ಪರಿಶೀಲನಾ ಪಟ್ಟಿ ಸಲ್ಲಿಸಲಾಗುವುದು. ಈಗಾಗಲೆ ಪಟ್ಟಣದಲ್ಲಿ ಒಟ್ಟು 887 ಹೆಕ್ಟೇರ್ ವಿಸ್ತೀರ್ಣ ಒಳಗೊಳ್ಳಲಿದೆ. ಈ ಪೈಕಿ ವಸತಿ 80 ಹೆಕ್ಟೇರ್, ವಾಣಿಜ್ಯ 22.45 ಹೆ., ಕೈಗಾರಿಕೆ 4.40 ಹೆ., ಉದ್ಯಾನವನ 5.90 ಹೆ., ಸಾರ್ವಜನಿಕ, ಅರೆ ಸಾರ್ವಜನಿಕ 36.26. ಹೆ., ಸಾರಿಗೆ ಮತ್ತು ಸಂಪರ್ಕ 27.84 ಹೆ., ಅರಣ್ಯ 16.28 ಹೆ., ಕೃಷಿ 663.64 ಹೆಕ್ಟೇರ್ ಸೇರಿದಂತೆ ಉಳಿದದ್ದು ಸೇರಿ 887 ಹೆಕ್ಟೇರ್ ಮಹಾಯೋಜನೆಗೆ ಒಳಪಡಲಿದೆ. ಈ ಯೋಜನೆ 2041 ರ ವರೆಗಿನ ಪೂರ್ವಯೋಜನೆಯಾಗಿದೆ. ಸರಕಾರ ತಾತ್ಕಾಲಿಕ ಅನುಮೋದನೆಯಾದ ಬಳಿಕ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗುತ್ತದೆ. ಬಳಿಕ ಸಾರ್ವಜನಿಕರಿಗೆ ಬದಲಾವಣೆ ಬೇಕಾದಲ್ಲಿ 60 ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಸದಸ್ಯ ಜಗದೀಶ್ ಅವರು ಮಹಾಹೋಜನೆ ಅಂಗೀಕಾರದ ಉದ್ದೇಶ ಏನು? ನಗರದಲ್ಲಿ ಜಾಗ ಖರೀದಿದಾರರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಕಾಂಪೌಡ್ ಕಟ್ಟಲೂ ಆಗದ ಪರಿಸ್ಥಿಯಿದೆ. ಇದಕ್ಕೆಲ್ಲ ಪರಿಗಹಾರ ಹೇಗೆ ಎಂದು ಪ್ರಶ್ನಿಸಿದರು. ಆಡಳಿತಾಧಿಕಾರಿ ಉತ್ತರಿಸಿ, ಭವಿಷ್ಯದ ಯೋಜನೆಗೆ ಮಹಾ ಯೋಜನೆ ಇಂದಲ್ಲ ನಾಳೆ ಬೇಕೆ ಬೇಕು. ಹಾಗಾಗಿ ಮುಂದಕ್ಕೆ ಪರಿಹಾರ ಸಿಗಲಿದೆ ಖಾಸಗಿ ರಸ್ತೆಗೆ, ಗೃಹ ಪ್ರದೇಶದಲ್ಲಿ 6 ರಿಂದ 9 ಮೀಟರ್, ವಾಣಿಜ್ಯ ಉದ್ದೇಶವಿದ್ದಲ್ಲಿ 12 ಮೀಟರ್ ರಸ್ತೆ ಪ್ರದೇಶ ಭಿಡಬೇಕು. ಖಾಸಗಿಯಾಗಿದ್ದಲ್ಲಿ ಪಂಚಾಯತ್ ಗೆ ದಾನ ಪತ್ರ ನೀಡಿದರೆ ಉಳಿದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.
ಮೆಸ್ಕಾಂ ಇಲಾಖೆಯಿಂದ ಆರ್ ಆರ್ ನಂಬರ್ ಬದಲಾಯಿಸಲು ಕಡತ ನೀಡಿದರೆ ಮೆಸ್ಕಾಂ ಇಲಾಖೆಯಿಂದ ವಿಳಂಭವಾಗುತ್ತಿದೆ. ಗೃಹಜ್ಯೋತಿ ಸೇರಿದಂತೆ ಅನೇಕ ಸಮಸ್ಯೆ ಎದುರಾಗುತ್ತಿದೆ. ಫಾರಂ 3 ನೀಡಿದ ಅಂತಿಮ, ಅದು ನೀಡಿದ ಬಳಿಕವೂ ವಿಳಂಬವಾಗುತ್ತಿದೆ. ಅದನ್ನು ಸರಿಪಡಿಸಬೇಕು ಎಂದು ಜಗರೀಶ್ ತಿಳಿಸಿದರು. ಮೆಸ್ಕಾಂ ಎಇ ಕ್ಲೆಮೆಂಟ್ ಬೆಂಜಮಿನ್ ಬ್ರಾಕ್ಸ್ ಉತ್ತರಿಸಿ, ಗುತ್ತಿಗೆದಾರರ ಮೂಲಕ ಕಡತ ಬಂದಿರುತ್ತದೆ. ಅದರಿಂದ ವಿಳಂಬವಾಗುತ್ತದೆ. ಹೆಸರು ಬದಲಾವಣೆ ಹಾಗೂ ಆರ್.ಆರ್. ನಂಬರ್ ವಿಚಾರವಾಗಿ ನೇರವಾಗಿ ಮೆಸ್ಕಂ ಇಲಾಖೆ ಸಂಪರ್ಕಿಸಿ ಎಂದು ಹೇಳಿದರು.
ಪ.ಪಂ. ಗೆ ಸಂಬಂಧಿಸಿದಂತೆ ಇರುವ ಬಾಡಿಗೆ ಆದಾಯ ಕಡಿಮೆಯಾಗಿದೆ ಏಕೆ? ಆದಾಯ ಕೊರತೆಯಿದೆ. ಬಾಡಿಗೆ ದಾರರು ಕೊಡುತ್ತಿಲ್ಲವೇ? ಎಂಬ ಬಗ್ಗೆ ಮಾಹಿತಿ ನೀಡುವಂತೆ ಜಗದೀಶ್ ಕೇಳಿದರು. ಇದಕ್ಕೆ ಮುಖ್ಯಾಧಿಕಾರಿ ರಾಜೇಶ್ ಉತ್ತರಿಸಿ, ವಾಣಿಜ್ಯ ಮಳಿಗೆದಾರರು ಬಾಡಿಗೆ ನೀಡುತ್ತಿಲ್ಲ, ಮೂರು ಮೂರು ನೋಟಿಸ್ ನೀಡಿದರೂ ಸ್ಪಂದನೆಯಿಲ್ಲ. ಹಾಗಾಗಿ ಇನ್ನು ಕಾಯುವ ಪ್ರಶ್ನೆಯಿಲ್ಲ, ತಕ್ಷಣವೇ ಪ.ಪಂ. ಒಳಪಟ್ಟ ಬಾಡಿಗೆದಾರರು ಬಾಡಿಗೆ ನೀಡದ ಕಟ್ಟಡವನ್ನು ಮುಟುಗೋಲು ಹಾಕುವುದು ಎಂದು ನಿರ್ಣಯ ಕೈಗೊಳ್ಳಲಾಯಿತು.
ಪ.ಜಾ., ಪ.ಪಂ. ಮನೆಗಳಿಗೆ ನೀರಿನ ಸಂಪರ್ಕಕ್ಕೆ ಮನೆ ಕಟ್ಟಿ ಒಂದು ವರ್ಷವಾದರೂ ನೀರಿಲ್ಲ. ಕಂದಾಯ ಇಲಾಖೆಗೆ 3 ಸಾವಿರ ರೂ. ಜೋಡಣೆ ಶುಲ್ಕ ಪಡೆಯಲಾಗುತ್ತಿದೆ. ಉಚಿತವಾಗಿ ನೀಡುವುದಿಲ್ಲವೇಕೆ ಎಂದು ಜಗದೀಶ್ ಪ್ರಶ್ನಿಸಿದರು, ಮಾಜಿ ಉಪಾಧ್ಯಕ್ಷ ಜಯಾನಂದ್ ಧ್ವನಿಗೂಡಿಸಿದರು. ಎಂಜಿನಿಯರ್ ಉತ್ತರಿಸಿ, ಸರಕಾರದ ಆದೇಶದಂತೆ ಮೂಲ ಸೌಕರ್ಯ ವಿಚಾರವಾಗಿ ನೀರಿನ ಸಂಪರ್ಕ ಉಚಿತ, ದಾಖಲೆ ಇದ್ದವರಿಗೆ 1600, ದಾಖಲೆ ಇಲ್ಲವಾದಲ್ಲಿ 3000 ರೂ. ಜೋಡಣಾ ಶುಲ್ಕವಿದೆ ಎಂದು ಹೇಳಿದರು. ಕಳೆದ ಬಾರಿ ಹಿಂದೆ ನಿರ್ಣಯ ಮಾಡಿ ಬಿಪಿಎಲ್ ಕಾರ್ಡ್ ನವರಿಗೆ ಉಚಿತ ನೀಡಬೇಕೆಂದು ನಿರ್ಣಯಿಸಿದ್ದೆವು, ಆದರೂ ನಿರ್ಣಯ ನಿಯಮ ಪಾಲಿಸಿಲ್ಲ ಎಂದು ಸದಸ್ಯ ಶರತ್ ಪ್ರಶ್ನೆಯೆತ್ತಿದರು. ಇದಕ್ಕೆ ಕ್ರಿಯಾ ಯೋಜನೆಯಲ್ಲಿ ಮಾರ್ಚ್ ನಲ್ಲಿ ಮಾಡುವುದು ಎಂದು ಅಧಿಕಾರಿಗಳು ತಿಳಿಸಿದರು.
ಸರಕಾರದ ಅನುದಾನದಲ್ಲಿ 2017-18 ರಲ್ಲಿ ಮಂಜೂರಾದ 10 ಕೋ.ರೂ. ಅನುದಾನದಲ್ಲಿ ಕೆ.ಆರ್.ಐ.ಡಿ.ಎಲ್. ಗೆ 34 ಕಾಮಗಾರಿ ನೀಡಲಾಗಿದೆ. ಆದರೆ ಈವರೆಗೆ ಪ.ಪಂ. ಹಸ್ತಾಂತರವೇ ಆಗಿಲ್ಲ. ಎಲ್ಲವೂ ಕಳಪೆ ಕಾಮಗಾರಿ ಮಾಡಿದ್ದಾರೆ. ಅದಕ್ಕೆ ಕ್ರಮ ಬೇಕು. ಇದನ್ನ ತನಿಖೆ ಮಾಡಬೇಕು ಎಂದು ಜಗದೀಶ್ ಆಗ್ರಹಿಸಿದರು. ಉಳಿದ ಸದಸ್ಯರು ಧ್ವನಿಗೂಡಿಸಿದರು.
ಎಂಜಿನಿಯರ್ ಮಹಾವೀರ ಆರಿಗ ಪ್ರತಿಕ್ರಿಯಿಸಿ,
ಕೆ.ಆರ್.ಡಿ.ಎಲ್.ಗೆ ಗುತ್ತಿಗೆ ಕಾಮಗಾರಿ ನೀಡುವಂತೆ ಸರಕಾರದಿಂದ ನಿರ್ದೇಶನವೇ ಇದೆ. ಒಟ್ಟು 34 ಕಾಮಗಾರಿಗಳಲ್ಲಿ 30 ಕಾಮಗಾರಿ ಪೂರ್ಣಗೊಳಿಸಿರುವುದಾಗಿ ವರದಿ ನೀಡಿದ್ದಾರೆ. ಹಸ್ತಾಂತರ ಮಾಡಲು ಸಮಿತಿ ನಿರ್ಧಾರವಾಗಬೇಕು. ಜತೆಗೆ ಕಾಮಗಾರಿ ಪೂರ್ಣಗೊಳ್ಳದ್ದಿರುವುದರಿಂದ ಪ.ಪಂ.ಗೆ ಹಸ್ತಾಂತರ ಮಾಡಿಕೊಂಡಿಲ್ಲ. ಆಡಳಿತಾಧಿಕಾರಿ ಪ್ರತಿಕ್ರಿಯಿಸಿ ತಕ್ಷಣ ಆಡಿಟ್ ರೊಪೋರ್ಟ್ ಮಾಡಿ ಜಿಲ್ಲಾಧಿಕಾರಿಗೆ ವರದಿ ಮಾಡಿ ಎಂದು ಸೂಚಿಸಿದರು.
ನಗರದ ರುದ್ರಭೂಮಿ ಅಭಿವೃದ್ಧಿಗೆ ಶಾಸಕರು ಸಭೆ ಕರೆದರು, 40 ಲಕ್ಷ ರೂ. ನಡಿ ಸ್ಮಶಾನಕ್ಕೆ ಕ್ರಿಯಾಯೋಜನೆ ರಚಿಸಲು ಸೂಚಿಸಲಾಗಿತ್ತು. ಆದರೆ ಪ.ಪಂ. ಇಚ್ಛಾಶಕ್ತಿಯಿಲ್ಲ. ಪಕ್ಕದ ಲಾಯಿಲದಲ್ಲಿ ಉಜಿರೆಯಲ್ಲಿ ಸುಂದರವಾದ ರುದ್ರಭೂಮಿಯಿದೆ. ಯಾಕೆ ಹೀಗೆ ಎಂದು ಜಗದೀಶ್ ಪ್ರಶ್ನಿಸಿದರು. ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ನಗರೋತ್ಥಾನದಲ್ಲಿ 40 ಲಕ್ಷ ರೂ. ಬಂದಿತ್ತು. ಆದರೆ ಚುನಾವಣೆ ಹಿನ್ನೆಲೆ ಟೆಂಡರ್ ಕರೆಯದ ಕಾರಣ ಹಣ ಸರಕಾರಕ್ಕೆ ಹೋಗಿದೆ. ಮತ್ತೆ ಅದಕ್ಕೆ ಪತ್ರ ಬರೆದು ಸರಕಾರದಿಂದ ಅನುದಾನ ಪಡೆಯಲಾಗಿದೆ. ಸದ್ಯದಲ್ಲೇ ಕ್ರಿಯಾಯೋಜನೆ ರಚಿಸಿ ಟೆಂಡರ್ ಕರೆಯಲಾಗುವುದು. ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸುವ ಉದ್ದೇಶವಾಗಿದೆ ಎಂದರು. ಇದಕ್ಕೆ ಜಯಾನಂದ ಗೌಡ ಮಧ್ಯ ಪ್ರವೇಶಿಸಿ ನಗರೋತ್ಥಾನದ ಎಲ್ಲ ಅನುದಾನ ಮತ್ತೆ ಪಡೆಯುವ ಪ್ರಯತ್ನವಾಗಬೇಕು. ಸಂತೆಕಟ್ಟೆ ಮೀನು ಮಾರುಕಟ್ಟೆ ಹೊಸದಾಗಿ ನಿರ್ಮಿಸಿ ಪಟ್ಟಣಕ್ಕೆ ಆದಾಯ ಬರುವಂತೆ ಮಾಡಬಹುದು. ತರಿಸುವ ಪ್ರಯತ್ನ ಮಾಡುವುದಾಗಿ ಮುಖ್ಯಾಧಿಕಾರಿ ರಾಜೇಶ್ ತಿಳಿಸಿದರು.
4.91 ಕೋ.ರೂ. ಮುಂಗಡ ಬಜೆಟ್
ಪಟ್ಟಣ ಪಂಚಾಯತ್ 2024-25 ನೇ ಸಾಲಿನಲ್ಲಿ 4,91,81,800 ಕೋ.ರೂ. ಮುಂಗಡ ಬಜೆಟ್ ಮಂಡಿಸಿದೆ. ಆಸ್ತಿ ತೆರಿಗೆ, ನೀರಿನ ಕರ, ಸ್ಟಾಲ್ ಬಾಡಿಗೆ, ಆರೋಗ್ಯ ಕರ, ಎಸ್.ಎಫ್.ಸಿ. ಮುಕ್ತನಿಧಿ ಅನುದಾನ, ಕಟ್ಟಡ ಪರಾವನಿಗೆ ಶುಲ್ಕ ಸೇರಿ ಒಟ್ಟು 4.91 ಕೋ.ರೂ. ಆದಾಯ ನಿರೀಕ್ಷಿಸಲಾಗಿದೆ. ಒಳಚರಂಡಿ, ಕುಡಿವ ನೀರು, ರಸ್ತೆ, ಘನತ್ಯಾಜ್ಯ ನಿರ್ವಹಣೆಗೆ ಆಧ್ಯತೆ ನೀಡಲಾಗಿದ್ದು 4.72 ಕೋ.ರೂ. ಒಟ್ಟು ಖರ್ಚು ಅಂದಾಜಿಸಲಾಗಿದೆ. ಆರಂಭಿಕ ಶಿಲ್ಕು 35,33,396 ರೂ., ಜಮೆ 4,91,81,800, ಒಟ್ಟು 5,27,15,196 ಕೋ.ರೂ., ಖರ್ಚು 4,72,66,800 ರೂ. ಅಂತಿಮ ಶಿಲ್ಕು 54,48,396 ರೂಪಾಯಿ ಬಜೆಟ್ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.