Home ಸ್ಥಳೀಯ ಸಮಾಚಾರ ಶಿಶಿಲ ಬೈರಾಪುರ ರಸ್ತೆ ಅಭಿವೃದ್ದಿಗೆ ಒತ್ತಾಯಿಸಿ ನ 2 ರಂದು ಬೃಹತ್ ಹಕ್ಕೊತ್ತಾಯ ಸಮಾವೇಶ

ಶಿಶಿಲ ಬೈರಾಪುರ ರಸ್ತೆ ಅಭಿವೃದ್ದಿಗೆ ಒತ್ತಾಯಿಸಿ ನ 2 ರಂದು ಬೃಹತ್ ಹಕ್ಕೊತ್ತಾಯ ಸಮಾವೇಶ

1
0

ಬೆಳ್ತಂಗಡಿ: ಬಹಳಷ್ಟು ವರ್ಷಗಳ ಬೇಡಿಕೆಯಾದ ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿ ಹಕ್ಕೋತ್ತಾಯ ಸಮಿತಿ ಶಿಶಿಲ ಇದರ ವತಿಯಿಂದ ನ.2ರಂದು ಸೋಮವಾರ ಅರಸಿನಮಕ್ಕಿಯಲ್ಲಿ ಶಿಶಿಲ-ಬೈರಪುರ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಬೃಹತ್ ಹಕ್ಕೋತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ, ಸಚಿವರು, ಸಂಸದರು, ಶಾಸಕರು ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಹಕ್ಕೋತ್ತಾಯ ಸಮಿತಿ ಅಧ್ಯಕ್ಷ ರಾಘವೇಂದ್ರ ನಾಯಕ್ ಹೇಳಿದರು.
ಅವರು ಅ.26ರಂದು ಬೆಳ್ತಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್, ಸಂಸದ ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜ, ಕೆಪಿಸಿಸಿ ಜಿಲ್ಲಾ ಅಧ್ಯಕ್ಷ ಪದ್ಮರಾಜ್ ಆರ್.ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಚಂದ್ರಣ್ಣನಿಡ್ವಾಳೆ ಮೂಡಿಗೆರೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್, ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ ಭಟ್, ಕೆಪಿಸಿಸಿ ಜಿಲ್ಲಾ ಕಾರ್ಯದರ್ಶಿ ಎ.ಸಿ ಮ್ಯಾಥ್ಯು ಭಾಗವಹಿಸಿ ಮಾತನಾಡಲಿದ್ದಾರೆ. ವಿವಿಧ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಸುಮಾರು 45ಕ್ಕೂ ಮಿಕ್ಕಿ ಸಂಘ-ಸಂಸ್ಥೆಗಳು ಕಾರ್ಯಕ್ರಮವನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದರು. ಅರಸಿನಮಕ್ಕಿ ಪರಿಸರದ ಏಳು ಗ್ರಾಮಗಳ ಗ್ರಾಮಸ್ಥರು ಅರಸಿನಮಕ್ಕಿ ಆಟದ ಮೈದಾನದಲ್ಲಿ ಸೇರಿ ಅಲ್ಲಿಂದ ವಾಹನ ಜಾಥಾದ ಮೂಲಕ ಸಮಾವೇಶದ ಸ್ಥಳಕ್ಕೆ ಬರಲಿದ್ದಾರೆ. ಸುಮಾರು 3 ಸಾವಿರಕ್ಕೂ ಮಿಕ್ಕಿ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಅನೇಕ ವರ್ಷಗಳಿಂದ ಹೋರಾಟಗಳು ನಡೆಯುತ್ತಿದ್ದರೂ ಈ ಯೋಜನೆ ಇನ್ನೂ ಕಾರ್ಯ ರೂಪಕ್ಕೆ ಬಂದಿರುವುದಿಲ್ಲ. ಆದ್ದುದರಿಂದ ಈ ರಸ್ತೆ ಅಭಿವೃದ್ಧಿ ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಆಧ್ಯತೆಯ ನೆಲೆಯಲ್ಲಿ ಅಗತ್ಯ ಅನುಮತಿಗಳನ್ನು ನೀಡಿ ಶಿಶಿಲ ಹಾಗೂ ಸುತ್ತ ಮುತ್ತಲಿನ ಶಿಬಾಜಿ, ಆರಸಿನಮಕ್ಕಿ, ಹತ್ಯಡ್ಕ, ಕಳೆಂಜ, ರೆಖ್ಯ, ಕೌಕ್ರಾಡಿ, ಕೊಕ್ಕಡ ಹಾಗೂ ಬೈರಾಪುರ ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸುಮಾರು 50,000ಕ್ಕಿಂತಲೂ ಹೆಚ್ಚು ಜನರ ಶಿಕ್ಷಣ, ಆರೋಗ್ಯ ವ್ಯಾಪಾರ ಸಂಪರ್ಕ, ಕೃಷಿ ಉತ್ಪನ್ನ ಮಾರಾಟ, ನಾಣ್ಯದ ಬೈರಾವೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಶಿಶಿಲೇಶ್ವರ ದೇವಸ್ಥಾನಗಳ ಪ್ರವಾಸೋಧ್ಯಮ ಅಭಿವೃದ್ಧಿಗೂ ಇದು ಸಹಕಾರಿಯಾಗಲಿರುವುದರಿಂದ ಸರಕಾರ ಈ ಬಗ್ಗೆ ಕ್ರಮ ವಹಿಸುವಂತೆ, ಸರಕಾರದ ಗಮನ ಸೆಳೆಯಲು ಈ ಹಕ್ಕೊತ್ತಾಯ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ರಾಘವೇಂದ್ರ ನಾಯಕ್ ತಿಳಿಸಿದರು.

ಹೋರಾಟ ಸಮಿತಿಯ ಕಾರ್ಯದರ್ಶಿ ಧರ್ಮರಾಜ್‌ ಅಡ್ಕಾಡಿ ಅವರು ಮಾತನಾಡಿ, ಹಕ್ಕೊತ್ತಾಯ ಸಮಾವೇಶದಲ್ಲಿ ಪಕ್ಷಾತೀತಾವಾಗಿ ನಡೆಯಲಿದೆ. ಎಲ್ಲಾ ಪಕ್ಷಗಳ ನಾಯಕರುಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷದವರು, ಧಾರ್ಮಿಕ ಮುಖಂಡರು ಹಾಗೂ ಶಿಶಿಲ,ಶಿಬಾಜಿ, ಅರಸಿನಮಕ್ಕಿ, ಹತ್ಯಡ್ಕ, ರೆಖ್ಯ ಕಳೆಂಜ, ಕೊಕ್ಕಡ ಹಾಗೂ ಬೈರಾಪುರ ಊರುಬಗೆ, ಸತ್ತಿಗನಹಳ್ಳಿ ಮುಂತಾದ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ. ಎಲ್ಲಾ ಗ್ರಾಮಗಳಲ್ಲಿ ಮನೆ ಸಂಪರ್ಕ ಕಾರ್ಯ ನಡೆಯುತ್ತಿದೆ. ಹಲವಾರು ಸಂಘಟನೆಗಳು ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ ಹಕ್ಕೊತ್ತಾಯ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಿಶಿಲ-ಬೈರಾಪುರ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ರಸ್ತೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಸದಸ್ಯರಾದ ನರಸಿಂಹ ಗೌಡ ಸುಂದರ ಕೆ., ಗೌರೀಶ್ ಅಮ್ಮಡಂಗೆ, ಪದ್ಮನಾಭ ಕೆ, ಪದ್ಮಪ್ಪ ಪೂಜಾರಿ, ರಾಧಕೃಷ್ಣ ಗುತ್ತು ಭಾಗವಹಿಸಿದ್ದರು. ಕರುಣಾಕರ ಗೌಡ ಸ್ವಾಗತಿಸಿ, ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here