ಬೆಳ್ತಂಗಡಿ; ಕನಿಷ್ಟ ವೇತನ ಜಾರಿ ಮಾಡಿ, ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರಕಾರ ಚುನಾವಣೆ ಸಮಯ ನೀಡಿದ್ದ ಗ್ಯಾರೆಂಟಿ ವೇತನ ಜಾರಿ ಮಾಡಿ, ಕೇಂದ್ರದ ಕಾರ್ಮಿಕ ವಿರೋದಿ ಕಾರ್ಮಿಕ ಸಂಹಿತೆಗಳನ್ನು ತಿರಸ್ಕರಿಸಿರಿ, ಕನಿಷ್ಟ ವೇತನ ಆದೇಶದಲ್ಲಿ ಬಿಟ್ಟ ವಿಭಾಗವಾದ ಬೀಡಿ, ಕ್ಯಾಶ್ಯೂ, ಗಾರ್ಮೆಂಟ್ಸ್ ಮೊದಲಾದ 19 ವಿಭಾಗಕ್ಕೂ ಇದೇ ಕನಿಷ್ಟ ವೇತನ ನಿಗದಿ ಪಡಿಸಿರಿ, ಗುತ್ತಿಗೆ ಕಾರ್ಮಿಕರ ಕೆಲಸವನ್ನು ಖಾಯಂಗೊಳಿಸಿ ಅವರಿಗೆ ಸೇವಾಭದ್ರತೆ ಒದಗಿಸಿರಿ ಮೊದಲಾದ ಬೇಡಿಕೆಗಳ ಈಡೇರಿಸಲು ಸರಕಾರ ಬದ್ದವಾಗಬೇಕು ಹಾಗೂ ಶಾಸಕರು ಸರಕಾರವನ್ನು ಒತ್ತಾಯಿಸಬೇಕು ಎಂದು ಸಿಐಟಿಯು ದ.ಕ. ಜಿಲ್ಲಾ ಅಧ್ಯಕ್ಷರಾದ ಬಿ.ಎಂ.ಭಟ್ ಅವರು ಹೇಳಿದರು.
ದಿನಾಂಕ 25.09.2026 ರಂದು ಕರ್ನಾಟಕ ರಾಜ್ಯದಾದ್ಯಂತ ಸಿಐಟಿಯು ನೇತೃತ್ವದಲ್ಲಿ ವಚನ ಭೃಷ್ಟ ಸರಕಾರದ ವಿರುದ್ದ ರಾಜ್ಯದ ಎಲ್ಲಾ ಶಾಸಕ, ಸಚಿವರ ಕಚೇರಿಗೆ ತೆರಳಿ ಮನವಿ ಕೊಡುವ ಕಾರ್ಯಕ್ರಮದ ಬಾಗವಾಗಿ ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ ಅವರ ಕಚೇರಿಗೆ ತೆರಳಿ ಮನವಿ ನೀಡಿ ಬಳಿಕ ಅವರು ಮಾತಾಡುತ್ತಿದ್ದರು. ಕಳೆದ ಸಪ್ಟಂಬರ್ 8 ರಂದು ಬೆಂಗಳೂರು ಪ್ರೀಡಂಪಾರ್ಕಲ್ಲಿ ಸುಮಾರು 30,000 ಕಾರ್ಮಿಕರ ಆಕ್ರೋಶ ರ್ಯಾಲಿ ನಡೆದಾಗ ಸರಕಾರದ ಪ್ರತಿನಿಧಿಯಾಗಿ ಆಗಮಿಸಿದ್ದ ಕಾರ್ಮಿಕ ಸಚಿವರೂ ಆಗಿರುವ ಶ್ರೀ ಸಂತೋಷ್ ಲಾಡ್ ಅವರು ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇವೆ ಜೊತೆಗೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲು 15.09.2026 ರಂದು ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಲು ಸಭೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿಗಳ ಸಂದೇಶವನ್ನು ನೀಡಿ ನಿರ್ಗಮಿಸಿದ್ದರು. ಆದರೆ ವಚನ ನೀಡಿ ಸಭೆ ನಡೆಸದೆ ಮಾತು ತಪ್ಪಿದ ವಚನ ಭೃಷ್ಟ ಸರಕಾರ ವಿರುದ್ದ ಈ ಹೋರಾಟ, ಮನವಿ ನೀಡುವ ಕಾರ್ಯಕ್ರಮ ನಡೆಸಲಾಗಿದ್ದು ರಾಜ್ಯದ ಎಲ್ಲಾ ಎ.ಎಲ್.ಸಿ ಕಚೇರಿ ಮುಂದೆ ಮತ್ತೆ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಈ ಸಂದರ್ಭ ಸಿಐಟಿಯು ದ.ಕ. ಜಿಲ್ಲಾ ಸಮಿತಿ ಸದಸ್ಯೆ ಜಯಶ್ರೀ, ಬೀಡಿ ಫೆಡರೇಶನ್ ನ ಪುಷ್ಪ, ಮಹಿಳಾ ಸಂಘದ ಕಿರಣಪ್ರಭಾ, ಕಟ್ಟಡ ಕಾರ್ಮಿಕ ಸಂಘದ ರಾಮಚಂದ್ರ, ವಿದ್ಯಾರ್ಥಿ ರಂಗದ ಮುಖಂಡ ವಿನುಶರಮಣ, ಅಶ್ವಿತ ಮೊದಲಾದವರು ಇದ್ದರು.










