

ಬೆಳ್ತಂಗಡಿ; ತಲೂಕಿನ ಮೊಗ್ರು ಗ್ರಾಮದ ಮುಗೇರಡ್ಕದಲ್ಲಿ ಮತ್ತೆ ಅಕ್ರಮ ಮರಳುಗಣಿಗಾರಿಕೆ ಆರಂಭಗೊಂಡಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಪಿಐಎಂ ಮುಖಂಡ ಬಿ.ಎಂ ಭಟ್ ಅವರು ಜಿಲ್ಲಾಧಿಕಾರಿಗಳು ಹಾಗೂ ಹಾಗೂ ಇತರ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ ಎರಡು ವರ್ಷಗಳ ಹಿಂದೆ ಏತ ನೀರಾವರಿ ಯೋಜನೆಯ ನೆಪದಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗಿತ್ತು. ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೂಗೊಳ್ಳಲಾಗಿರಲಿಲ್ಲ. ಇದೀಗ ಮತ್ತೆ ಇಲ್ಲಿ ರಾಜಾರೋಷವಾಗಿ ಅಕ್ರಮ ಮರಳು ಗಣಿಗಾರಿಕೆಯನ್ನು ಆರಂಭಿಸಲಾಗಿದೆ. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದಾಗ ತಮಗೆ ಎಲ್ಲ ಇಲಾಖೆಗಳ ಬೆಂಬಲ ಇದೆ ಎಂದು ಅವರಿಗೆ ಅಕ್ರಮ ಮರಳು ಸಾಗಾಟಗಾರರು ಬೆದರಿಕೆ ಹಾಕುತ್ತಿರುವುದಾಗಿಯೂ ದೂರಿನಲ್ಲಿ ಆರೋಪಿಸಲಾಗಿದೆ.
ಅಕ್ರಮ ತಡೆಯಬೇಕಾದ ಅಧಿಕಾರಿಗಳು ಅಕ್ರಮ ದಂಧೆಕೋರರೊಂದಿಗೆ ಶಾಮೀಲಾಗಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿರುವ ಬಿ.ಎಂ ಭಟ್ ಅವರು ಅಕ್ರಮ ಮರಳು ಗಣಿಗಾರಿಕೆಯ ಫೊಟೋಗಳನ್ನೂ ದೂರಿನೊಂದಿಗೆ ಸಲ್ಲಿಸಿದ್ದು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
