
ಬೆಳ್ತಂಗಡಿ: ಸಂವಿಧಾನ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಬಹುತ್ವದ ಆಶಯಗಳ ಎದುರು ಹಲವು ಬಗೆಯ ಸವಾಲುಗಳು ಎದುರಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಯುವಜನರ ರಾಜಕೀಯ ಪ್ರಜ್ಞೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಭವಿಷ್ಯದ ಭಾರತವನ್ನು ಕುರಿತ ಚರ್ಚೆಗಳಿಗೆ ವೇದಿಕೆಯಾಗಲು ‘ಜನನುಡಿ–2026’ ಸಜ್ಜಾಗಿದೆ. ‘ಯುವಜನ ರಾಜಕಾರಣ: ದಿಕ್ಕು – ಭವಿಷ್ಯ – ಸವಾಲು’ ಎಂಬ ಪ್ರಧಾನ ಆಶಯದೊಂದಿಗೆ ನವೆಂಬರ್ 28 ಮತ್ತು 29ರಂದು ಮಂಗಳೂರಿನ ಬಲ್ಮಠದಲ್ಲಿರುವ ಕೆಟಿಸಿ ಕ್ಯಾಂಪಸ್ ನಲ್ಲಿ ಎರಡು ದಿನಗಳ ಜನನುಡಿ ಕಾರ್ಯಕ್ರಮ ನಡೆಯಲಿದೆ.
ಇಂದಿನ ಭಾರತವು ಕೇವಲ ರಾಜಕೀಯ ಬದಲಾವಣೆಗಳ ಕಾಲಘಟ್ಟದಲ್ಲಿಲ್ಲ. ಆರ್ಥಿಕ ಅಸಮಾನತೆ, ನಿರುದ್ಯೋಗ, ಖಾಸಗೀಕರಣ, ಶಿಕ್ಷಣದ ವ್ಯಾಪಾರೀಕರಣ, ಜಾತಿ ತಾರತಮ್ಯ, ಕೋಮುವಾದ, ಧರ್ಮಾಧಾರಿತ ಧ್ರುವೀಕರಣ, ಕಾರ್ಪೊರೇಟ್ ಬಂಡವಾಳದ ಪ್ರಭಾವ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ವಿಶ್ವಾಸಾರ್ಹತೆಯ ಕುರಿತ ಪ್ರಶ್ನೆಗಳು ದೇಶದ ಭವಿಷ್ಯದ ಬಗ್ಗೆ ಗಂಭೀರ ಆತಂಕಗಳನ್ನು ಹುಟ್ಟುಹಾಕಿವೆ. ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ಪ್ರಬಲ ಸಾಧನಗಳಾಗಿರುವಂತೆಯೇ, ಸುಳ್ಳು ಸುದ್ದಿ, ದ್ವೇಷದ ಪ್ರಚಾರ ಮತ್ತು ರಾಜಕೀಯ ಧ್ರುವೀಕರಣದ ವೇದಿಕೆಗಳಾಗಿಯೂ ಬಳಕೆಯಾಗುತ್ತಿವೆ.
ಈ ದುರಿತ ಕಾಲದಲ್ಲಿ ಯುವಜನರು ಕೇವಲ ಪ್ರೇಕ್ಷಕರಾಗಿ ಉಳಿಯಬೇಕೇ ಅಥವಾ ದೇಶದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ದಿಕ್ಕನ್ನು ನಿರ್ಧರಿಸುವ ಸಕ್ರಿಯ ಶಕ್ತಿಯಾಗಬೇಕೇ ಎಂಬ ಪ್ರಶ್ನೆಯನ್ನು ಜನನುಡಿ ಮುನ್ನೆಲೆಗೆ ತರಲಿದೆ. ಯುವಜನರ ಉದ್ಯೋಗ, ಶಿಕ್ಷಣ, ಬದುಕು, ಘನತೆ, ಹಕ್ಕುಗಳು ಮತ್ತು ರಾಜಕೀಯ ಭಾಗವಹಿಸುವಿಕೆಯನ್ನು ಕೇಂದ್ರವಾಗಿಟ್ಟುಕೊಂಡು ಸಮಕಾಲೀನ ಭಾರತದ ಸವಾಲುಗಳನ್ನು ವಿವಿಧ ಆಯಾಮಗಳಲ್ಲಿ ಜನನುಡಿ – 2026 ರಲ್ಲಿ ಚರ್ಚಿಸಲಾಗುತ್ತದೆ.
ಜನನುಡಿಯ ಉದ್ದೇಶ ಕೇವಲ ವಿಚಾರ ಸಂಕಿರಣವಲ್ಲ. ವಿಭಿನ್ನ ಅಭಿಪ್ರಾಯಗಳು, ಪ್ರಗತಿಪರ ಚಿಂತನೆಗಳು, ವೈಜ್ಞಾನಿಕ ಮನೋಭಾವ, ಮಾನವೀಯ ಮೌಲ್ಯಗಳು ಮತ್ತು ಪ್ರಜಾಸತ್ತಾತ್ಮಕ ಸಂವಾದಗಳಿಗೆ ಮುಕ್ತ ವೇದಿಕೆಯನ್ನು ನಿರ್ಮಿಸುವುದು ಜನನುಡಿಯ ಆಶಯ. ಯುವಜನರು ಇತಿಹಾಸ, ವರ್ತಮಾನ ಮತ್ತು ಭವಿಷ್ಯವನ್ನು ವಿಮರ್ಶಾತ್ಮಕವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುವುದು, ಜಾತಿ, ಧರ್ಮ, ಭಾಷೆ, ಲಿಂಗ ಮತ್ತು ವರ್ಗದ ಆಧಾರದಲ್ಲಿ ನಡೆಯುವ ತಾರತಮ್ಯಗಳ ವಿರುದ್ಧ ಸಾಮಾಜಿಕ ಪ್ರಜ್ಞೆ ಬೆಳೆಸುವುದು, ಸಂವಿಧಾನದ ಆಶಯಗಳನ್ನು ಬದುಕಿನಲ್ಲಿ ಜಾರಿಗೊಳಿಸುವ ಹೋರಾಟಗಳಿಗೆ ಬಲ ನೀಡುವುದು, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಹೊಸ ತಲೆಮಾರಿನ ನಾಯಕತ್ವವನ್ನು ರೂಪಿಸುವುದು ಜನನುಡಿಯ ಪ್ರಮುಖ ಗುರಿಗಳಾಗಿವೆ.
ರಾಜಕೀಯವೆಂದರೆ ಕೇವಲ ಚುನಾವಣೆ, ಅಧಿಕಾರ ಮತ್ತು ಪಕ್ಷಗಳ ನಡುವಿನ ಸ್ಪರ್ಧೆಯಲ್ಲ. ಜನರ ಬದುಕು, ಜೀವನೋಪಾಯ, ಶಿಕ್ಷಣ, ಉದ್ಯೋಗ, ಸಂಸ್ಕೃತಿ, ಸ್ವಾತಂತ್ರ್ಯ ಮತ್ತು ಹಕ್ಕುಗಳ ಮೇಲೆ ಪ್ರಭಾವ ಬೀರುವ ಎಲ್ಲವೂ ರಾಜಕಾರಣವೇ ಎಂಬ ವಿಶಾಲ ಅರ್ಥದಲ್ಲಿ ಜನನುಡಿ ಯುವಜನರೊಂದಿಗೆ ಸಂವಾದ ನಡೆಸಲಿದೆ. ವಿಶೇಷವಾಗಿ ಜೆನ್ ಝಿ ತಲೆಮಾರಿನ ಯುವಜನರ ಅನುಭವ, ಪ್ರಶ್ನೆ, ಪ್ರತಿರೋಧ ಮತ್ತು ನಿರೀಕ್ಷೆಗಳಿಗೆ ಈ ಬಾರಿಯ ಜನನುಡಿ ಆದ್ಯತೆ ನೀಡಲಿದೆ.
ನವೆಂಬರ್ 28, ಶನಿವಾರ ಮೊದಲ ದಿನ ಬೆಳಿಗ್ಗೆ 9 ಗಂಟೆಗೆ ಪುಸ್ತಕ ಮೇಳ ಉದ್ಘಾಟನೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಹಿರಿಯ ಹೋರಾಟಗಾರ, ಚಿಂತಕ ಬಸವರಾಜ ಸೂಳಿಭಾವಿ (ಬಸೂ) ಪುಸ್ತಕ ಮೇಳ ಉದ್ಘಾಟಿಸಲಿದ್ದಾರೆ. ಅನಿಲ್ ಹೊಸಮನಿ ಉಪಸ್ಥಿತರಿರಲಿದ್ದಾರೆ, ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಳಿಗ್ಗೆ 10ರಿಂದ ಜನನುಡಿ ಉದ್ಘಾಟನಾ ಗೋಷ್ಠಿ ಆರಂಭವಾಗಲಿದ್ದು ಪ್ರೊ. ರಹಮತ್ ತರೀಕೆರೆ ಉದ್ಘಾಟಿಸಲಿದ್ದಾರೆ. ದೆಹಲಿ ವಿದ್ಯಾರ್ಥಿ ಚಳವಳಿಯ ಪ್ರತಿನಿಧಿ ಶರಣ್ಯ ವರ್ಮ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ವಿಶೇಷ ಮಾತುಗಳನ್ನಾಡಲಿದ್ದಾರೆ. ಪ್ರೊ. ನರೇಂದ್ರ ನಾಯಕ್, ಡಾ. ರಮೇಶ್ ಬೆಳ್ಳಂಕೊಂಡ, ವಾಸುದೇವ ಉಚ್ಚಿಲ ಮತ್ತು ಡಾ. ಅಮರ್ ಗೌರವ ಉಪಸ್ಥಿತರಿರಲಿದ್ದಾರೆ. ಮೂಡ್ನಾಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಮನೋಜ್ ವಾಮಂಜೂರು ನಿರೂಪಿಸಲಿದ್ದಾರೆ.
ಮಧ್ಯಾಹ್ನದ ಬಳಿಕ ‘ಭವಿಷ್ಯದ ಭಾರತ: ಆರ್ಥಿಕತೆ ಮತ್ತು ಜೀವನೋಪಾಯ’ ಎಂಬ ಗೋಷ್ಠಿ ನಡೆಯಲಿದ್ದು ಶಿವಸುಂದರ್ ವಿಷಯ ಮಂಡಿಸಲಿದ್ದಾರೆ. ಹೋರಾಟಗಾರ, ಲೇಖಕ ನಂದಕುಮಾರ್ ಕುಂಬ್ರಿಉಬ್ಬು ಪ್ರತಿಕ್ರಿಯಿಸಲಿದ್ದಾರೆ. ಜೆನ್ ಝಿ ಪ್ರತಿಕ್ರಿಯೆಯಾಗಿ ಕಾನೂನು ವಿದ್ಯಾರ್ಥಿ ಅಶ್ಫಕ್ ಎಂ.ಜಿ. ಕೊಪ್ಪಳ ಮಾತನಾಡಲಿದ್ದಾರೆ. ಡಾ. ಸಬಿತಾ ಬನ್ನಾಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 3ರಿಂದ ಅಸಮಾನತೆಯ ಹಾಡು-ಪಾಡು ಎಂಬ ಗೋಷ್ಟಿ ನಡೆಯಲಿದ್ದು ಡಿಂಗ್ರಿ ಭರತ್ ಅವರ ಮಾತು ಮತ್ತು ಹಾಡಿನ ಕಾರ್ಯಕ್ರಮ ನಡೆಯಲಿದೆ. ಆ ಬಳಿಕ ‘ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ’ ಗೋಷ್ಟಿ ನಡೆಯಲಿದ್ದು, ಬಿ. ಶ್ರೀಪಾದ ಭಟ್ ಮತ್ತು ವಿಕಾಸ್ ಮೌರ್ಯ ವಿಷಯ ಮಂಡಿಸಲಿದ್ದಾರೆ. ಜೆನ್ ಝಿ ಪ್ರತಿಕ್ರಿಯೆಯನ್ನು ಡಾ. ಶಭಾನ ಮೈಸೂರು ನೀಡಲಿದ್ದಾರೆ. ಚಂದ್ರಶೇಖರ ಗೊರಬಾಳ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 5.30ರಿಂದ ಬಹುಭಾಷಾ ನಟ ಪ್ರಕಾಶ್ ರೈ ಅವರೊಂದಿಗೆ ವಿಶೇಷ ಸಂವಾದ ನಡೆಯಲಿದೆ. ಡಾ. ನಾಗೇಗೌಡ ಕೆ ಎಸ್ ಮಾತುಕತೆ ನಡೆಸಿಕೊಡಲಿದ್ದಾರೆ.
ಸಂಜೆ 6.30ರಿಂದ ಡಿಂಗ್ರಿ ಭರತ್ ಅವರ ಹಲ್ಗಿ ನಾದ ತಂಡ ಹಾಗು ಕರಾವಳಿಯ ನಿರ್ದಿಗಂತ ತಂಡದಿಂದ ವಿಚಾರಪ್ರಚೋದಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ರಂಗಕರ್ಮಿಗಳಾದ ಪ್ರಕಾಶ್ ನೊರನ್ಹಾ, ಸಂತೋಷ್ ಶೆಟ್ಟಿ ಹಿರಿಯಡ್ಕ ಮತ್ತು ವಿದ್ದು ಉಚ್ಚಿಲ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ನವೆಂಬರ್ 29, ಭಾನುವಾರ ಪ್ರತಿರೋಧದ ಕವಿತೆ: ಕವಿಗೋಷ್ಠಿಯಿಂದ ಕಾರ್ಯಕ್ರಮ ಆರಂಭವಾಗಲಿದೆ. ವಿಲ್ಸನ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದು, ಶಂಕರ ಕೆಂಚನೂರು ಆಶಯ ಮಾತುಗಳನ್ನಾಡಲಿದ್ದಾರೆ. ಚಲಂ ಹಾಡ್ಲಹಳ್ಳಿ, ರೇಣುಕಾ ನಿಡಗುಂದಿ, ಚಾಂದ್ ಪಾಷ, ಫಾತಿಮಾ ರಲಿಯಾ, ಸ್ಟಾನಿ ಬೇಳ, ರೇಶ್ಮಾ ಬಾರಿಗ, ಸಚಿನ್ ಅಂಕೋಲ, ಮಲ್ಲಮ್ಮ ಯಾಟಗಲ್, ದೀಪ ಬುದ್ದೆ, ರಮ್ಯ ಮೂರ್ನಾಡು, ಸವಿರಾಜ್ ಆನಂದೂರು, ಅಂಜಲಿ ಬೆಳಗಲ್, ಸಿರಾಜ್ ಬಿಸರಳ್ಳಿ ಕವಿತೆಗಳನ್ನು ವಾಚಿಸಲಿದ್ದಾರೆ.
ಆ ಬಳಿಕ ‘ರಾಷ್ಟ್ರೀಯತೆ, ಅಸ್ಮಿತೆ ಮತ್ತು ಡಿಜಿಟಲ್ ರಾಜಕಾರಣ’ ಗೋಷ್ಟಿಯಲ್ಲಿ ಪತ್ರಕರ್ತ ಜಿ. ವಿಷ್ಣು (ಉಡುಪಿ), ಜೆಎನ್ಯು ಸಂಶೋಧನಾ ವಿದ್ಯಾರ್ಥಿ ವಸಂತ ಕಲಾಲ್ ವಿಷಯ ಮಂಡಿಸಲಿದ್ದಾರೆ. ಜೆನ್ ಝಿ ಪ್ರತಿಕ್ರಿಯೆಯನ್ನು ಶಾಲಿಕಾ ಎಕ್ಕಾರು ನೀಡಲಿದ್ದಾರೆ. ಹಿರಿಯ ಪತ್ರಕರ್ತ ಎನ್.ಎ.ಎಂ. ಇಸ್ಮಾಯಿಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ ‘ಕೋಮುವಾದ ಮತ್ತು ಕ್ರೋನಿ ಕ್ಯಾಪಿಟಲಿಸಂ ಮೈತ್ರಿ: ಸವಾಲು’ ಗೋಷ್ಟಿಯಲ್ಲಿ ಡಾ. ಮೀನಾಕ್ಷಿ ಬಾಳಿ, ಎ. ನಾರಾಯಣ ಮತ್ತು ಬಿ. ಸುರೇಶ ವಿಷಯ ಮಂಡಿಸಲಿದ್ದಾರೆ. ಡಾ. ಕಿರಣ್ ಗಾಜನೂರು ಸಮನ್ವಯ ನಡೆಸಲಿದ್ದಾರೆ.
ಮಧ್ಯಾಹ್ನದ ಬಳಿಕ ದೆಹಲಿ ವಿದ್ಯಾರ್ಥಿ ಚಳವಳಿಯ ರುವಾರಿ ಶರಣ್ಯ ವರ್ಮ ಅವರೊಂದಿಗೆ ವಿಶೇಷ ಸಂವಾದ ನಡೆಯಲಿದೆ.
ಸಂಜೆ ‘ಪ್ರಜಾಪ್ರಭುತ್ವದ ಅಳಿವು ಉಳಿವು – ಸಿದ್ಧಾಂತಗಳ ಪಾತ್ರ’ ಎಂಬ ಮಹತ್ವದ ಗೋಷ್ಟಿ ನಡೆಯಲಿದ್ದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಿಪಿಐಎಂ ಕಾರ್ಯದರ್ಶಿ ಡಾ. ಕೆ. ಪ್ರಕಾಶ್ ಮತ್ತು ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್ ವಿಷಯ ಮಂಡಿಸಲಿದ್ದಾರೆ. ಹಿರಿಯ ಚಿಂತಕ ಡಾ. ಬಿ.ಆರ್. ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 5ರಿಂದ ಜನನುಡಿ ಸಮಾರೋಪ ನಡೆಯಲಿದ್ದು, ಕನ್ನಡದ ಖ್ಯಾತ ಲೇಖಕಿ ಕೆ. ನೀಲಾ, ಡಾ. ಎಚ್ ಎಸ್ ಅನುಪಮ ಸಮಾರೋಪ ಮಾತುಗಳನ್ನು ಆಡಲಿದ್ದಾರೆ. ಡಾ. ಸುಬ್ಬು ಹೊಲೆಯಾರ್, ಡಾ. ಇಸ್ಮಾಯಿಲ್, ಮಂಜುನಾಥ ಅದ್ದೆ ಉಪಸ್ಥಿತರಿರಲಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರೈ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಹತ್ವದ ಮಾತುಗಳನ್ನು ಆಡಲಿದ್ದಾರೆ.
ಎರಡು ದಿನಗಳ ಚರ್ಚೆ, ಸಂವಾದ ಮತ್ತು ವಿಚಾರಮಂಥನದ ಮೂಲಕ ಪ್ರಜಾಪ್ರಭುತ್ವದ ಉಳಿವು, ಸಾಮಾಜಿಕ ನ್ಯಾಯ ಮತ್ತು ಫ್ಯಾಸಿಸಂ ವಿರೋಧಿ ಹೋರಾಟಗಳ ಮುಂದಿನ ದಿಕ್ಕಿನ ಕುರಿತು ಕಾರ್ಯಯೋಜನೆಯನ್ನು ರೂಪಿಸುವುದು ಸಮಾರೋಪದ ಪ್ರಮುಖ ಆಶಯವಾಗಿದೆ.
ಜನನುಡಿ–2026ರಲ್ಲಿ ರಾಜ್ಯದ ವಿವಿಧ ಭಾಗಗಳ ಲೇಖಕರು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಯುವಜನರು, ಸಾಮಾಜಿಕ ಹೋರಾಟಗಾರರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘಟಕರು ತಿಳಿಸಿದ್ದಾರೆ.