ಬೆಳ್ತಂಗಡಿ : ಭಾರತೀಯ ರಿಸರ್ವ್ ಬ್ಯಾಂಕ್ ನಿಯೋಜಿತ ಸ್ವಯಂ ನಿಯಂತ್ರಕ ಸಂಸ್ಥೆಯಾದ ಸಾಧನ್ ಸಂಸ್ಥೆಯು ಇತ್ತೀಚೆಗೆ ದೆಹಲಿಯಲ್ಲಿ ಆಯೋಜಿಸಿದ 21ನೇ ರಾಷ್ಟ್ರೀಯ ಸಮಾವೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ‘2025-2026ರ ಸಾಲಿನ ಅತ್ಯುತ್ತಮ ಮಹಿಳಾ ಸ್ನೇಹಿ ಆರ್ಥಿಕ ಸಂಸ್ಥೆ – ಇಲಾಬೆನ್ ಸ್ಮಾರಕ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ। ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ನಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ
‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಯು ಮಹಿಳಾ ಕಾರ್ಯಕರ್ತರಿಗೆ ಅತೀ ಸುರಕ್ಷಿತ ಕಾರ್ಯಸ್ಥಳ ಮತ್ತು ಉತ್ತಮ ಬಾಂಧವ್ಯದ ವಾತಾವರಣವನ್ನು ನೀಡುವ ಮೂಲಕ ದೇಶಕ್ಕೆ ಮಾದರಿಯಾದ ಒಂದು ಸಂಸ್ಥೆಯಾಗಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ.
ಈ ಪ್ರಶಸ್ತಿಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅನಿಲ್ ಕುಮಾರ್ ಎಸ್.ಎಸ್., ಯೋಜನೆಯ ಮುಖ್ಯ ಹಣಕಾಸು ಅಧಿಕಾರಿಗಳಾದ ಶಾಂತರಾಮ್ ಆರ್. ಪೈ, ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ ಬಿ. ಮತ್ತು ಶ್ರೀಮತಿ ದಯಾಶೀಲರವರು ಸ್ವೀಕರಿಸಿದರು.
ಸಾಧನ್ ಸಂಸ್ಥೆಯು ದೇಶದ 210 ಆರ್ಥಿಕ ಸಂಸ್ಥೆಗಳ ನೋಂದಾವಣೆಯನ್ನು ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ ನಿಯೋಜಿತ ಸ್ವಯಂ ನಿಯಂತ್ರಕ ಸಂಸ್ಥೆಯಾಗಿದ್ದು ಇದು ಬ್ಯಾಂಕ್‌ಗಳು, ಬ್ಯಾಂಕಿನ ಬಿ.ಸಿ.ಪ್ರತಿನಿಧಿ ಸಂಸ್ಥೆಗಳು, ಎಂಬಿಎಫ್‌ಸಿ, ಕಿರು ಫೈನಾನ್ಸಿಯಲ್ ಬ್ಯಾಂಕ್, ಕಿರು ಆರ್ಥಿಕ ಸಂಸ್ಥೆಗಳು, ಕೋ ಆಪರೇಟಿವ್ ಸೊಸೈಟಿಗಳನ್ನು ಸದಸ್ಯರನ್ನಾಗಿ ಹೊಂದಿದೆ.ಇಲಾಬೆನ್‌ರವರು ಮಹಿಳಾ ಸಬಲೀಕರಣದಲ್ಲಿ ದೇಶಕ್ಕೆ ವಿಶೇಷವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಸ್ಮರಣಾರ್ಥ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಇದೊಂದು ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಕಿರು ಆರ್ಥಿಕ ವಲಯದ ಪ್ರಶಸ್ತಿಯಾಗಿರುತ್ತದೆ.ಗ್ರಾಮಾಭಿವೃದ್ಧಿ ಯೋಜನೆಯ ಒಟ್ಟು 41 ಸಾವಿರ ಕಾರ್ಯಕರ್ತರಲ್ಲಿ 29 ಸಾವಿರ ಮಂದಿ ಮಹಿಳಾ ಕಾರ್ಯಕರ್ತರಿದ್ದು ಅವರುಗಳಿಗೆ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಕೆಲಸ ನಿರ್ವಹಿಸಲು ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ. ಕಾರ್ಯಕರ್ತರಿಗೆ ಅತ್ಯುತ್ತಮ ತಂತ್ರಜ್ಞಾನವನ್ನು ವ್ಯವಸ್ಥೆಗೊಳಿಸಲಾಗಿದೆ. ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಬೇಕಾದ ತರಬೇತಿಯನ್ನು ಆಗಾಗ ನೀಡಲಾಗುತ್ತಿದೆ. ಉನ್ನತ ಆಡಳಿತ ನಿರ್ವಹಣೆ ಹಾಗೆಯೆ ಧನಾತ್ಮಕ ವಾತಾವರಣದ ಮೂಲಕ ದಿನನಿತ್ಯದ ಕಾರ್ಯಚಟುವಟಿಕೆಗಳು ಅತ್ಯಂತ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗಲು ಅವಕಾಶವನ್ನು ಕಲ್ಪಿಸಿದೆ. ವರ್ಗಾವಣೆ ಪ್ರಕ್ರಿಯೆಯಲ್ಲಿಯೂ ಮಹಿಳಾ ಕಾರ್ಯಕರ್ತರಿಗೆ ನೇರವಾಗಿ ಅವರ ಕುಟುಂಬ ಮುಖ್ಯವಾಗಿ ‘ಸ್ಪೇಸ್ ಜಾಯಿನಿಂಗ್’ ಆಧಾರದ ಮೇಲೆ ಅವರಿಗೆ ಸೂಕ್ತವಾಗುವ ಪ್ರದೇಶಗಳಿಗೆ ವರ್ಗಾವಣೆಯನ್ನು ಮಾಡಲಾಗುತ್ತಿದೆ. ಪಾರದರ್ಶಕವಾಗಿ ಭಡ್ತಿ ಪ್ರಕ್ರಿಯೆಗಳ ಮೂಲಕ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡುವುದರೊಂದಿಗೆ ಅವರ ಪ್ರಗತಿಗೂ ಮುಕ್ತ ಅವಕಾಶವನ್ನು ನೀಡಲಾಗಿದೆ.
POSH ಕಾಯಿದೆಯ ಬಗ್ಗೆ ಆಯ್ದ ಪ್ರಮುಖ ಮಹಿಳಾ ಕಾರ್ಯಕರ್ತರಿಗೆ ವಿಶೇಷ ತರಬೇತಿಯನ್ನು ನೀಡಿ ರಾಜ್ಯದಾದ್ಯಂತ ಮಹಿಳೆಯರ ಸುರಕ್ಷತೆಗೆ ಅತಿ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗಿದೆ.
