ಬೆಳ್ತಂಗಡಿ; ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 80 ವರ್ಷಗಳ ನಂತರವೂ ನಮ್ಮ ಸಂವಿಧಾನಬದ್ಧ ಹಕ್ಕುಗಳನ್ನು , ಸವಲತ್ತುಗಳನ್ನು ಸಂರಕ್ಷಿಸಲು ನಾವೆಲ್ಲರೂ ಸಂಘಟಿತರಾಗಿ , ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದು ಗುರುವಾಯನಕೆರೆ ಎಕ್ಸೆಲ್ ಕಾಲೇಜ್ ನ ಉಪನ್ಯಾಸಕ ಚಂದ್ರಪ್ಪ ಮದ್ದಡ್ಕ ಕರೆ ನೀಡಿದರು.
ಅವರು ಅದಿತ್ಯವಾರ ಅಂಬೇಡ್ಕರ್ ಭವನ ಕುಕ್ಕೇಡಿ ಇಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ನಡೆದ ಮೀಸಲಾತಿ , ಸಂವಿಧಾನ ಸಂರಕ್ಷಣಾ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ಭಾರತದ ಮೂಲನಿವಾಸಿಗಳಾದ ದಲಿತ ಸಮುದಾಯದ ಸಮಸ್ಯೆಗಳೂ ಇಂದಿಗೂ ಬಾರಿ ಬದಲಾವಣೆಯಾಗಿಲ್ಲ. ಶಿಕ್ಷಣ , ಉದ್ಯೋಗ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ನಮ್ಮ ಸಮುದಾಯಕ್ಕೆ ಬೆನ್ನೆಲುಬಾಗಿ ನಿಂತಿರುವ ಸಂವಿಧಾನವನ್ನು ಹಂತ ಹಂತವಾಗಿ ಬಲಹೀನಗೊಳಿಸುವ ಪಿತೂರಿ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತದಂತೆ ಧರ್ಮದ ಚೌಕಟ್ಟಿನಲ್ಲಿ ತಡೆಯಲಾಗುತ್ತಿದ್ದು , ಇದು ಅಪಾಯಕಾರಿ ಬೆಳವಣಿಗೆ ಎಂದ ಅವರು ಆ ಚೌಕಟ್ಟನ್ನು ಮೀರಿ ನಾವು ನಮ್ಮ ಹಕ್ಕುಗಳು , ಸವಲತ್ತುಗಳನ್ನು ಸಂರಕ್ಷಿಸಲು ಸಂವಿಧಾನದ ಉಳಿವಿಗಾಗಿ ಹೋರಾಟದ ಹಾದಿಯನ್ನು ಹಿಡಿಯಬೇಕಾದ ಅನಿವಾರ್ಯತೆ ಹಿಂದಿಗಿಂತಲೂ ಅಗತ್ಯವಿದೆ ಎಂದು ಹೇಳಿದರು.
ವಿಚಾರ ಸಂಕಿರಣದಲ್ಲಿ ಮೀಸಲಾತಿ ಮತ್ತು ವರ್ತಮಾನದ ಸವಾಲು , ಸಂವಿಧಾನ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ವಿಷಯದ ಬಗ್ಗೆ ಪತ್ರಕರ್ತ , ಚಿಂತಕ ಶ್ರೀರಾಮ ದಿವಾನ , ಯುವ ಪತ್ರಕರ್ತೆ ಯೋಗಿನಿ ಮಚ್ಚಿನ , ನಿವೃತ್ತ ಪ್ರಾಧ್ಯಾಪಕ ಸೋಮಪ್ಪ ಅಳಂಗಾರು , ಡಾ. ವಾಸುದೇವ ಬೆಳ್ಳೆ ಸವಿಸ್ತಾರವಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು ಸಂವಿಧಾನ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಅಧ್ಯಕ್ಷ ಸುಂದರ ಕಾಶಿಪಟ್ಣ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿ ಉಪಾಧ್ಯಕ್ಷರಾದ ವಿಜಯ ಕುಮಾರ್ ಬಜಿರೆ , ದಸಂಸ(ಅಂಬೇಡ್ಕರ್ ವಾದ) ಕುಕ್ಕೇಡಿ- ನಿಟ್ಟಡೆ ಗ್ರಾಮ ಸಮಿತಿ ಸಂಚಾಲಕ ಹರೀಶ್ ಪಂಡಿಜೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಸುಕೇಶ್ ಮಾಲಾಡಿ ಕಾರ್ಯಕ್ರಮ ನಿರೂಪಿಸಿ , ಸ್ವಾಗತಿಸಿದರು. ವಿನಯ್ ಕುಮಾರ್ ಉಜಿರೆ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ತಾಲೂಕು ಸಂವಿಧಾನ ಸಂರಕ್ಷಣಾ ಸಮಿತಿ ಕೋಶಾಧಿಕಾರಿ ಶಿವಾನಂದ ಪಡಂಗಡಿ , ನಾರಾವಿ ಜಿಲ್ಲಾ ಪಂಚಾಯತ್ ಉಸ್ತುವಾರಿ ಸದಾಶಿವ ವೇಣೂರು , ಅಳದಂಗಡಿ ಜಿಲ್ಲಾ ಪಂಚಾಯತ್ ಉಸ್ತುವಾರಿ ಸತೀಶ್ ಸುಲ್ಕೇರಿಮೊಗ್ರು , ಲಾಯಿಲ ಜಿಲ್ಲಾ ಪಂಚಾಯತ್ ಉಸ್ತುವಾರಿ ಎಲ್ ಹರೀಶ್ ಕುಮಾರ್ , ಉಜಿರೆ ಜಿಲ್ಲಾ ಪಂಚಾಯತ್ ಉಸ್ತುವಾರಿ ನಾರಾಯಣ ಪುದುವೆಟ್ಟು , ಕುವೆಟ್ಟು ಜಿಲ್ಲಾ ಪಂಚಾಯತ್ ಉಸ್ತುವಾರಿ ಪ್ರಶಾಂತ್ ಮದ್ದಡ್ಕ , ಧರ್ಮಸ್ಥಳ ಜಿಲ್ಲಾ ಪಂಚಾಯತ್ ಉಸ್ತುವಾರಿ ಶ್ರೀಧರ್ ಕಳೆಂಜ , ಕಣಿಯೂರು ಜಿಲ್ಲಾ ಪಂಚಾಯತ್ ಉಸ್ತುವಾರಿ ಗಣೇಶ್ ಕಣಿಯೂರು ಹಾಗೂ ಸಮಿತಿಯ ಗೌರವ ಸಲಹೆಗಾರರಾದ ಒಬಯ್ಯ ಆರೋಂಬೋಡಿ , ಪರಮೇಶ್ವರ ಅಂಡಿಂಜೆ , ಕೂಸ ಅಳದಂಗಡಿ , ಸಂಜೀವ ದೇವರಗುಡ್ಡೆ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ , ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ ಪದಾಧಿಕಾರಿಗಳಾದ ಶೇಖರ್ ವಿ.ಜಿ ವೇಣೂರು , ಚರಣ್ ರಾಜ್ ಕುಕ್ಕೇಡಿ , ಅವಿನಾಶ್ ಕುರ್ತೊಡಿ , ಯತೀಶ್ ಧರ್ಮಸ್ಥಳ , ರಂಜಿತ್ ಧರ್ಮಸ್ಥಳ , ಶೇಖರ್ ವಿ ಧರ್ಮಸ್ಥಳ , ಪ್ರವೀಣ್ ಸೂರ್ಯ ಹೊಸಂಗಡಿ , ವೇಣೂರು ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ಉಪಸ್ಥಿತರಿದ್ದರು.