ಬೆಳ್ತಂಗಡಿ: ಲಾಯಿಲದಲ್ಲಿ ವಾಸದ ಮನೆಗೆಂದು ಭೂಪಸರಿವರ್ತನೆ ಮಾಡಿ ಅದರಲ್ಲಿ ಅಕ್ರಮವಾಗಿ ಬಹುಮಗಡಿ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು ಈ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಬಗ್ಗೆ ಬೆಳ್ತಂಗಡಿ ತಾಲೂಕು ಪಂಚಾಯತು ಕಾರ್ಯನಿರ್ವ ಹಣಾಧಿಕಾರಿ ಭವಾನಿಶಂಕರ್ ಹಾಗೂ ಇತರರ ವಿರುದ್ದ ಲಾಯಿಲ ನಿವಾಸಿ ಅನ್ಸಾರ್ ಎಂಬವರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ದೂರನ್ನು ಸ್ವೀಕರಿಸಿದ್ದಾರೆ.
ದೂರಿನಲ್ಲಿ ಏನಿದೆ;
ಲಾಯಿಲ ನಿವಾಸಿ ಅನ್ಸಾರ್ ಎಂಬವರು ನೀಡಿರುವ ದೂರಿನಲ್ಲಿ ಲಾಯಿಲ ಗ್ರಾಮದಲ್ಲಿ ಮೊಹಮ್ಮದ್ ರಫೀಕ್ ಎಂಬವರು ವಾಣಿಜ್ಯ ಉದ್ದೇಶಕ್ಕಾಗಿ ಬಹುಮಹಡಿ ಕಟ್ಟಡವನ್ನು ನಿರ್ಮಿಸುತ್ತಿದ್ದು ಈಕಟ್ಟಡಕ್ಕೆ ಸಮರ್ಪಕ ಪರವಾನಿಗೆಗಳನ್ನು ಪಡೆದುಕೊಂಡಿಲ್ಲ, ಗೃಹ ನಿರ್ಮಾಣದ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಿಕೊಂಡು ಅದರಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಕಟ್ಟಡ ಕಟ್ಟಲಾಗುತ್ತಿದೆ. ಇದರ ಬಗ್ಗೆ ಲಾಯಿಲ ಗ್ರಾಮಪಂಚಾಯತು ಮತ್ತು ಬೆಳ್ತಂಗಡಿ ತಾಲೂಕು ಪಂಚಾಯತು ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಅವರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೆ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದೀಗ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಡೋರ್ ನಂಬರ್ ಹಾಗೂ ವಿದ್ಯುತ್ ಸಂಪರ್ಕ ಕ್ಕೆ ಎನ್.ಒ.ಸಿ ನೀಡುವ ಬಗ್ಗೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಈ ದೂರನ್ನು ಲೋಕಾಯುಕ್ತರು ಸ್ವೀಕರಿಸಿದ್ದಾರೆ ಪ್ರಕರಣದ ಬಗ್ಗೆ ಲೋಕಾಯುಕ್ತರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ.










