ಪುತ್ತೂರು: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಗೆ ಇಡಲಾಗಿದ್ದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್‌ರಾಜ್ಯ ಕಳ್ಳತನದ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಕೇರಳದ ಬದಿಯಡ್ಕದಲ್ಲಿ ಬಂಧಿಸಿದ್ದಾರೆ.
ಪುತ್ತೂರು ಬೆಟ್ಟಂಪಾಡಿ ನಿವಾಸಿ ಹಾಗೂ ದೇವಸ್ಥಾನದ ಆಡಳಿತ ಪದಾಧಿಕಾರಿ ವಿನೋದ್ ಕುಮಾರ್ ಬಿ. (44) ಅವರು ನೀಡಿದ ದೂರಿನಂತೆ, ಆ.25ರಂದು ಬೆಳಿಗ್ಗೆ ದೇವಸ್ಥಾನಕ್ಕೆ ತೆರಳಿದಾಗ ಹೊರಗೆ ಇಡಲಾಗಿದ್ದ ಕಾಣಿಕೆ ಡಬ್ಬಿ ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು. ಬಳಿಕ ದೇವಸ್ಥಾನದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ, ಆ.24ರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಕಾಣಿಕೆ ಡಬ್ಬಿಯನ್ನು ಎತ್ತಿಕೊಂಡು ಹೋಗುತ್ತಿರುವುದು ಕಂಡುಬಂದಿತ್ತು.
ಕಾಣಿಕೆ ಡಬ್ಬಿಯಲ್ಲಿ ಸುಮಾರು ₹4,500 ಹಣವಿದ್ದು, ಡಬ್ಬಿಯ ಮೌಲ್ಯ ₹2,500 ಎಂದು ಅಂದಾಜಿಸಲಾಗಿತ್ತು. ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 110/2026, ಕಲಂ 305(e) ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿಯ ಪತ್ತೆಗಾಗಿ ತನಿಖಾ ತಂಡವು ಕೇರಳದ ಕಿನ್ನಿಂಗಾರು, ಬದಿಯಡ್ಕ ಹಾಗೂ ಆದೂರು ಸೇರಿದಂತೆ ವಿವಿಧೆಡೆಗಳಲ್ಲಿ ತನಿಖೆ ನಡೆಸಿತ್ತು. ಈ ವೇಳೆ ಅಂತರ್‌ರಾಜ್ಯ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೇರಳದ ಕಾಸರಗೋಡು ನಿವಾಸಿ ಸತೀಶ್ (31) ಎಂಬಾತನನ್ನು ಬದಿಯಡ್ಕದಲ್ಲಿ ಬಂಧಿಸಲಾಗಿದೆ.
ಬಂಧಿತ ಆರೋಪಿಯಿಂದ ಕಳವು ಮಾಡಲಾಗಿದ್ದ ಕಾಣಿಕೆ ಡಬ್ಬಿ ಹಾಗೂ ಕೃತ್ಯಕ್ಕೆ ಬಳಸಿದ್ದ ಅಂದಾಜು ₹1 ಲಕ್ಷ ಮೌಲ್ಯದ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯ ವಿರುದ್ಧ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಅಡಿಕೆ ಕಳ್ಳತನ ಪ್ರಕರಣವೂ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಮೋದ್ ಕುಮಾರ್, ಪೊಲೀಸ್ ಉಪಾಧೀಕ್ಷಕರು, ಪುತ್ತೂರು ಉಪ ವಿಭಾಗ ಇವರ ನಿರ್ದೇಶನದಂತೆ, ತಿಮ್ಮಪ್ಪ ನಾಯ್ಕ್, ಪ್ರಭಾರ ಪೊಲೀಸ್ ನಿರೀಕ್ಷಕರು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಇವರ ಮಾರ್ಗದರ್ಶನದಲ್ಲಿ, ಪಿಎಸ್ಐಗಳಾದ ಗುಣಪಾಲ ಜೆ. ಮತ್ತು ಸುಷ್ಮಾ ಜಿ. ಭಂಡಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಿಡಿಆರ್ ವಿಭಾಗದ ಸಂಪತ್ ಹಾಗೂ ದಿವಾಕರ್ ಅವರು ತನಿಖೆಗೆ ಸಹಕರಿಸಿದ್ದಾರೆ.
