Home ಸ್ಥಳೀಯ ಸಮಾಚಾರ ಬೆಳ್ತಂಗಡಿ; ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಪಂಗಡದವರ ಕುಂದು ಕೊರತೆ ಪರಿಶೀಲನಾ ಸಭೆ; ಡಿಸಿ ಮನ್ನಾ...

ಬೆಳ್ತಂಗಡಿ; ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಪಂಗಡದವರ ಕುಂದು ಕೊರತೆ ಪರಿಶೀಲನಾ ಸಭೆ; ಡಿಸಿ ಮನ್ನಾ ಭೂಮಿಗಾಗಿ  ಒಕ್ಕೊರಲ ಒತ್ತಾಯ

0
2

ಬೆಳ್ತಂಗಡಿ; ಜಿಲ್ಲೆಯಲ್ಲಿ ಡಿಸಿ ಮನ್ನಾ ಭೂಮಿ‌ ಇದ್ದರೂ ಅದು ಅರ್ಹರಿಗೆ ಹಂಚಿಕೆಯಾಗುತ್ತಿಲ್ಲ, ಅಕ್ರಮಗಳು ನಡೆಯುತ್ತಲೇ ಇದೆ. ಕಳೆದ 25 ವರ್ಷಗಳಿಂದ ಇದಕ್ಕಾಗಿ ಹೋರಾಟ ಮಾಡುತ್ತಲೇ ಇದ್ದೇವೆ, ಡಿಸಿಮನ್ನಾ ಭೂಮಿಯನ್ನು ಪರಿಶಿಷ್ಟ ಜಾತಿ, ಪಂಗಡದವರಿಗೆ ಎರಡು ಎಕರೆ ಯಂತೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಬೆಳ್ತಂಗಡಿ ತಾಪಂ ಸಭಾಂಗಣದಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜರಗಿದ ಪರಿಶಿಷ್ಟ ಜಾತಿ ಪಂಗಡದವರ ಕುಂದು ಕೊರತೆ ಸಭೆಯಲ್ಲಿ ವ್ಯಕ್ತವಾಯಿತು.
ತಾಲೂಕಿನಲ್ಲಿ ಈಗ 481 ಎಕರೆಯಷ್ಟು
ಡಿಸಿ ಮನ್ನಾ ಭೂಮಿ ಲಭ್ಯವಿದೆ. ಇದಲ್ಲದೆ ಅಲ್ಲಲ್ಲಿ ಜಮೀನು ಆಕ್ರಮಣ ಆಗಿದೆ ಅರಣ್ಯ ಇಲಾಖೆ ಬಳಿಯಲ್ಲಿಯೂ ಡಿಸಿ ಮನ್ನಾ ಭೂಮಿ‌ಇದೆ, ಒಟ್ಟು ಸುಮಾರು ಒಂದುಸಾವಿರ ಎಕ್ರೆಯಷ್ಟು ಜಮೀನು ತಾಲೂಕಿನಲ್ಲಿ ಇರಬಹುದು ಈ ಎಲ್ಲ ಜಮೀನನ್ನೂ ಸರಕಾರ ವಶಕ್ಕೆ ತೆಗೆದುಕೊಂಡು ಸಮುದಾಯದ ಅರ್ಹರಿಗೆ ಹಂಚಿಕೆ ಮಾಡುವಂತೆ‌ ಸಭೆಯಲ್ಲಿ ಮುಖಂಡರು ಒತ್ತಾಯಿಸಿದರು.
ಸಭೆಯಲ್ಲಿ ಬಿ.ಕೆ. ವಸಂತ, ಸಂಜೀವ ಆರ್., ಶೇಖರ ಕುಕ್ಕೇಡಿ, ಸಿ.ಕೆ. ಚಂದ್ರಕಲಾ, ರಾಜು ಪಡಂಗಡಿ ,ಬೇಬಿ ಸುವರ್ಣ, ವೆಂಕಣ್ಣ ಕೊಯ್ಯೂರು ಮತ್ತಿತರರು ಈವಿಚಾರಗಳನ್ನು ಜಿಲ್ಲಾಧಿಕಾರಿಯ ಗಮನಕ್ಕೆ ತಂದರು.
1996 ರಿಂದ ಜಿಲ್ಲೆಯಲ್ಲಿ 8509 ಎಕರೆ ಡಿಸಿ ಮನ್ನಾ ಭೂಮಿಯನ್ನು ಗುರುತಿಸಲಾಗಿದ್ದು ಇದರಲ್ಲಿ 7,366 ಎಕರೆ ಹಂಚಿಕೆ ಮಾಡಲಾಗಿದೆ. ಉಳಿದ ಭೂಮಿ ಮಾತ್ರ ಈಗ ಲಭ್ಯವಿದೆ. ಇದೀಗ 2,800 ಫಲಾನುಭವಿಗಳ ಅರ್ಜಿ ಬಾಕಿ ಇದ್ದು ಇದರ ಪೈಕಿ 1977 ಮಂದಿ ಕೃಷಿಗೆ ಹಾಗೂ 375 ಮಂದಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಇದಕ್ಕೆ ಬೇಕಾದಷ್ಟು ಅಗತ್ಯ ಭೂಮಿ ಇಲ್ಲದ ಕಾರಣ ಸರಕಾರಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ ಭೂಮಿ ಕೊರತೆ ಇರುವುದರಂದ ಎಲ್ಲರಿಗೂ ಸೈಟ್ ಹಂಚಿಕೆ ಮಾಡುವ ಪ್ರಯತ್ನ ನಡೆಯುತ್ತಿದೆ, ಡಿಸಿ ಮನ್ನಾ ಭೂಮಿಗೆ ಅರ್ಜಿ ಸಲ್ಲಿಸಲು ಇನ್ನಷ್ಟು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಕೆ.ವಿ. ಉತ್ತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರುಗಳು ಸೈಟ್ ಹಂಚಿಕೆ ಬೇಡ ಕನಿಷ್ಟ ಒಂದು ಎಕ್ರೆಯಾದರೂ ಕೃಷಿ ಭೂಮಿ ಕೊಡಿ‌ ಸೈಟ್ ಕೊಟ್ಟರೆ ಅವರು ಕೃಷಿ ಮಾಡಿ ಬದುಕನ್ನು ಕಟ್ಟುವುದು ಹೇಗೆ ಸೈಟ್ ಹಂಚಿಕೆ ಬೇಡ ಕೃಷಿ ಭೂಮಿ ನೀಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿ ಎಂದು ಒತ್ತಾಯಿಸಿದರು. ಈ ಬಗ್ಗೆ ಸರಕಾರ ತೆಗೆದುಕೊಳ್ಳುವ ನಿರ್ಧಾರದಂತೆ‌ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಯವರು ತಿಳಿಸಿದರು.

ಪಿಲ್ಯ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಸುವುದರಿಂದ ಅಪಾಯದ ಸ್ಥಿತಿ ಇದೆ, ಇದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೂಸ ಅಳದಂಗಡಿ ಮಾಹಿತಿ ನೀಡಿದರು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.

ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ನೀಡಿ;.

ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸುವಾಗ ಎಸ್ ಸಿ ಎಸ್ ಟಿ ಗೆ ಮೀಸಲಾತಿ ನೀಡಲಾಗುತ್ತಿಲ್ಲ ಇದರಿಂದ ಯುವಕರು ಉದ್ಯೋಗಾವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದು ಮಾಜಿ ಜಿ.ಪಂ‌ಸದಸ್ಯ‌ ಶೇಖರ‌ ಕುಕ್ಕೇಡಿ ಸಭೆಯ ಗಮನ‌ಸೆಳೆದರು. ಏಕಕಾಲದಲ್ಲಿ 20 ಹುದ್ದೆಗಳಿಗೆ ಹೊರಗುತ್ತಿಗೆ ನೇಮಕಾತಿ ಮಾಡುವಾಗ ಮೀಸಲಾತಿ ನೀಡಬೇಕು ಎಂದು ಸರಕಾರದ ಆದೇಶವಿದೆ ಆದರೆ ಒಂದು ಇಲಾಖೆಯಲ್ಲಿ 20 ಹುದ್ದೆಗಳ ನೇಮಕಾತಿ ಆಗುವುದಿಲ್ಲ ಆದ್ದರಿಂದ ಪರಿಶಿಷ್ಟ ಜಾತಿ ಪಂಗಡದವರಿಗೆ ಅವಕಾಶವೇ ಸಿಗುತ್ತಿಲ್ಲ. ಆದ್ದರಿಂದ ಹೊರಗುತ್ತಿಗೆ ಆಧಾರದಲ್ಲಿ ಯಾವುದೇ ಎಷ್ಟೇ ಹುದ್ದೆಗಳಿಗೆ ನೇಮಕಾತಿ ಆಗುತ್ತಿದ್ದರೂ ಅದರಲ್ಲಿ ಅರ್ಹವಾದ ಹುದ್ದೆಗಳನ್ನು ಎಸ್.ಸಿ.ಎಸ್.ಟಿ ಗೆ ಮೀಲಿಡಬೇಕು ಎಂದು ಸಭೆಯಲ್ಲಿ‌ ಮುಖಂಡರುಗಳು ಒತ್ತಾಯಿಸಿದರು. ಈ ಬಗ್ಗೆ ಉತ್ತರಿಸಿದ ಜಿಲ್ಲಾಧಿಕಾರಿಯವರು ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿಯನ್ನು ಅನುಸರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬೆಳ್ತಂಗಡಿ ಪಟ್ಟಣ ಪಂಚಾಯಿತಿಯಲ್ಲಿ ಪೌರಕಾರ್ಮಿಕರಿಗೆ ವೇತನ ಎಸ್ ಸಿ ಎಸ್ ಟಿ ಅನುದಾನದಲ್ಲಿ ನೀಡಲಾಗುತ್ತಿದೆ, ನಗರದಲ್ಲಿ ಹಕ್ಕು ಪತ್ರ ಕೊಟ್ಟರೂ ಜಾಗ ಇಲ್ಲದ‌ಸ್ಥಿತಿಯಿದೆ, ಲಾಯಿಲ ಗ್ರಾಮಕ್ಕೆ ಕೃಷಿ ಇಲಾಖೆಯಿಂದ ಯಾವುದೇ ಮಾಹಿತಿಗಳು ಸಿಗುತ್ತಿಲ್ಲ ಪುತ್ರಬೈಲಿನಲ್ಲಿ ಕಿಂಡಿ ಅಣೆಕಟ್ಟು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಇದರಿಂದಾಗಿ ಆಗಾಗ ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತಿದೆ. ಕರಂಬಾರು ಗ್ರಾಮದಲ್ಲಿ ಅಕ್ರಮ- ಸಕ್ರಮ ಪ್ರಕ್ರಿಯೆ ನಡೆಯದೆ 25 ದಲಿತ ಕುಟುಂಬಗಳಿಗೆ ಸಮಸ್ಯೆ ಉಂಟಾಗಿದೆ, ಫ್ಲೋಟಿಂಗ್ ‌ಸಮರ್ಪಕವಾಗಿ ನಡೆಯದ ಕಾರಣ ಸಾಮಾನ್ಯ ಜನರು ಮನೆ ಕಟ್ಟಲು ಸಾಲ ಪಡೆಯಲು ಸಮಸ್ಯೆಯಾಗುತ್ತಿದೆ. ನ್ಯಾಯಾಲಯದ ಮೂಲಕ ಪಾಲು ಪಟ್ಟಿ ಮಾಡಿಸಿಕೊಂಡರೂ ಹಕ್ಕುಪತ್ರ ಬದಲಾಗುತ್ತಿಲ್ಲ, ಪುತ್ತೂರು ಎಸಿಯವರು ಇಂತಹ ಪ್ರಕರಣಗಳಲ್ಲಿ ಸರಿಯಾದ ಸ್ಪಂದನೆ ನೀಡದೆ ಕಡತಗಳ ವಿಲೇವಾರಿ ಆಗುತ್ತಿಲ್ಲ, ಕೆಸಿಡಿಸಿಯವರು ಗೇರು ಬೆಳೆಯಲು ಲೀಸ್ ಗೆ ಕೊಟ್ಟ ಜಾಗಗಳಲ್ಲಿ ಗೇರು ಕೃಷಿ ಇಲ್ಲದ ಕಾರಣ ಆ ಜಾಗಗಳನ್ನು ಸರಕಾರ ವಶಪಡಿಸಿಕೊಳ್ಳಬೇಕು,ಡಿಸಿ ತಾಲೂಕು ಕೇಂದ್ರಕ್ಕೆ ತಿಂಗಳಿಗೆ ಒಂದು ಬಾರಿ ಭೇಟಿ ನೀಡಬೇಕು, ಅಂಬೇಡ್ಕರ್ ಭವನಗಳ ನಿರ್ಮಾಣ ಮತ್ತಿತರ ವಿಚಾರಗಳ ಕುರಿತು ಮುಖಂಡರಾದ ಸಂತೋಷ್ ಕುಮಾರ್, ಶ್ರೀಧರ ಕಳೆಂಜ, ಕೂಸ ಅಳದಂಗಡಿ, ಶ್ರೀನಿವಾಸ, ಸೇಸಪ್ಪ ನಲಿಕೆ, ನೇಮಿರಾಜ, ಪುಷ್ಪರಾಜ, ಶಿವಪ್ಪ, ಗಣೇಶ್ ಪ್ರಸಾದ್, ವಸಂತ ಬೆಳಾಲು, ಶೇಖರ ಲಾಯಿಲ ಮತ್ತಿತರರು ಜಿಲ್ಲಾಧಿಕಾರಿಗಳಲ್ಲಿ ಚರ್ಚಿಸಿದರು.
ಐಟಿಡಿಪಿ ಅಧಿಕಾರಿ ಬಸವರಾಜ್, ಡಿವೈಎಸ್ಪಿ ರೋಹಿಣಿ ಸಿ. ಕೆ. ಸಮಾಜ ಕಲ್ಯಾಣ ಇಲಾಖೆಯ ಧನಂಜಯ ಉಪಸ್ಥಿತರಿದ್ದರು
ತಾಪಂ ಇಒ ಭವಾನಿ ಶಂಕರ ಸ್ವಾಗತಿಸಿದರು.
ನಾನಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

NO COMMENTS

LEAVE A REPLY

Please enter your comment!
Please enter your name here