
ಬೆಳ್ತಂಗಡಿ: ಜಲೀಲ್ ಎಂಬ ವ್ಯಕ್ತಿಯ ಫೋಟೋವನ್ನು ಎಡಿಟ್ ಮಾಡಿ, ಅವರು ಪಕ್ಷದ ಶಾಲ್ ಧರಿಸಿರುವಂತೆ ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹಾಗೂ ದಾರಿತಪ್ಪಿಸುವ ಮಾಹಿತಿ ಹರಡಲಾಗಿದೆ ಎಂದು ಆರೋಪಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಲಾಯಿಲ ಬ್ಲಾಕ್ ಸಮಿತಿ ವತಿಯಿಂದ ಸೋಮವಾರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
“ಶ್ರೀ ಹರೀಶ್ ಪೂಂಜ ಅಭಿಮಾನಿ ಬಳಗ” ಹಾಗೂ “ದಿನೇಶ್ ಚಾರ್ಮಾಡಿ” ಎಂಬ ಫೇಸ್‌ಬುಕ್ ಖಾತೆಗಳಲ್ಲಿ ಜಲೀಲ್ ಅವರ ಫೋಟೋವನ್ನು ಎಡಿಟ್ ಮಾಡಿ, ಪಕ್ಷದ ಶಾಲ್ ಧರಿಸಿರುವಂತೆ ಚಿತ್ರಿಸಲಾಗಿದೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಹಾಗೂ ತಪ್ಪು ಅಭಿಪ್ರಾಯ ಮೂಡಿಸುವ ಉದ್ದೇಶದಿಂದ ಸುಳ್ಳು ಮಾಹಿತಿ ಹರಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕೃತ್ಯದಿಂದ ಪಕ್ಷದ ಘನತೆ ಮತ್ತು ಗೌರವಕ್ಕೆ ಧಕ್ಕೆ ಉಂಟುಮಾಡುವ ಪ್ರಯತ್ನ ನಡೆದಿದ್ದು, ಸಾರ್ವಜನಿಕರನ್ನು ದಾರಿತಪ್ಪಿಸುವ ರೀತಿಯಲ್ಲಿ ಸುಳ್ಳು ಮಾಹಿತಿ ಪ್ರಸಾರ ಮಾಡಲಾಗಿದೆ ಎಂದು SDPI ಲಾಯಿಲ ಬ್ಲಾಕ್ ಸಮಿತಿ ದೂರಿನಲ್ಲಿ ತಿಳಿಸಿದೆ.
ಆದ್ದರಿಂದ, ಸಂಬಂಧಿತ ಫೇಸ್‌ಬುಕ್ ಖಾತೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಫೋಟೋವನ್ನು ಎಡಿಟ್ ಮಾಡಿ ಪೋಸ್ಟ್ ಮಾಡಿದ ವ್ಯಕ್ತಿ ಅಥವಾ ಖಾತೆಯ ನಿರ್ವಾಹಕರನ್ನು ಪತ್ತೆಹಚ್ಚಿ ಅಗತ್ಯ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸರಿಗೆ ಮನವಿ ಮಾಡಲಾಗಿದೆ.