
ಮಂಗಳೂರು; ಹನ್ನೆರಡು ವರ್ಷಗಳಹಿಂದೆ ಮಂಗಳೂರಿನ ಪಣಂಬೂರಿನಲ್ಲಿ ನಡೆದಿದ್ದ ಗಂಗಾಧರ ಪಾಂಗಳ ಕೊಲೆ ಪ್ರಕರಣದ ಎಲ್ಲ ನಾಲ್ಕು ಮಂದಿ ಆರೋಪಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ದಿನಾಂಕ: 15-05-2014 ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೀನಕಳಿಯಾ ಗಣೇಶ್ ಶಿಪ್ಪಿಂಗ್ ಗೋಡೌನ್ ಬಳಿ ಸಾರ್ವಜನಿಕ ಡಾಂಬಾರು ರಸ್ತೆಯಲ್ಲಿ ಮೀನಕಳಿಯ ನಿವಾಸಿ ಗಂಗಾಧರ ಪಾಂಗಾಳ ಎಂಬವರನ್ನು ಆರೋಪಿಗಳಾದ ಸತೀಶ್ ಬೈಕಂಪಾಡಿ, ಪುಷ್ಪರಾಜ್, ಹರೀಶ್ ಬೈಕಂಪಾಡಿ, ಭಾಸ್ಕರ್ ಬೈಕಂಪಾಡಿ ಎಂಬವರುಗಳು ಸೇರಿ ಹಳೆ ದ್ವೇಷದಿಂದ ಒಳಸಂಚು ನಡೆಸಿ ಕೊಲೆ ಮಾಡಿದ್ದರು. ಆದರೆ ಮೊದಲಿಗೆ ರಸ್ತೆಯಲ್ಲಿ ಅಪಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿ, ಅಪಘಾತ ಪ್ರಕರಣ ದಾಖಲಾಗಿದ್ದು, ನಂತರ ಪ್ರಾಥಮಿಕ ತನಿಖೆಯಲ್ಲಿ ಕೊಲೆ ಎಂದು ಕಂಡು ಬಂದಿದ್ದರಿಂದ ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಅ.ಕ್ರ ನಂಬ್ರ 98/2014 ಕಲಂ: 302, 201, 109, 120(ಬಿ) ಸಹಿತ 34 ಐಪಿಸಿರಂತೆ ಪ್ರಕರಣ ದಾಖಲಾಗಿರುತ್ತದೆ.
ಗಂಗಾಧರ ಪಾಂಗಳರವರ ಕೊಲೆ ಪ್ರಕರಣದ 1 ನೇ ಆರೋಪಿ ಸತೀಶ್ ಬೈಕಂಪಾಡಿ ಎಂಬಾತನನ್ನು ಬೈಕಂಪಾಡಿ ಮೊಗವೀರ ಮಹಾಸಭಾದ ಸದಸ್ಯತ್ವದಿಂದ ಅಮಾನತುಪಡಿಸಲು ಮೃತ ಗಂಗಾಧರ ಪಾಂಗಾಳರವರೇ ಮೂಲ ಕಾರಣ ಕರ್ತರೆಂದು ಭಾವಿಸಿ ಅವರ ಮೇಲೆ ದ್ವೇಷ ಸಾಧಿಸಿದ ಆರೋಪಿತರುಗಳು ಪೂರ್ವ ನಿಯೋಜಿತ ಒಳಸಂಚು ರೂಪಿಸಿ ಬೊಲೇರೋ ವಾಹನ ಮೂಲಕ ಗಂಗಾಧರ ಪಾಂಗಾಳ ರವರ ಸ್ಕೂಟರ್ ಗೆ ಉದ್ದೇಶ ಪೂರ್ವಕವಾಗಿ ಹಿಂದಿನಿಂದ ಹಿಂಭಾಲಿಸಿ ಬಂದು ಡಿಕ್ಕಿ ಹೊಡೆಸಿದ್ದು ಗಂಗಾಧರ ಪಾಂಗಾಳರವರು ಕೆಳಗೆ ಬಿದ್ದು ತಲೆ ,ಮೈ ಕೈಗೆ ಪೆಟ್ಟಾಗಿ ಮೃತಪಟ್ಟ ಬಗ್ಗೆ ಧೃಢಪಡಿಸಿಕೊಂಡ ನಂತರ ಆರೋಪಿತರುಗಳು ತಾವು ಬಂದ ವಾಹನದ ಸಮೇತ ಸ್ಥಳದಿಂದ ಪರಾರಿಯಾಗಿದ್ದರು.
ಈ ಬಗ್ಗೆ ತನಿಖೆ ಕೈಗೊಂಡು ಮಾನ್ಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದ.ಕ ಮಂಗಳೂರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಮಾನ್ಯ ನ್ಯಾಯಾಧೀಶರು ಈ ದಿನ ದಿನಾಂಕ 27/07/2026 ರಂದು ಒಂದರಿಂದ ನಾಲ್ಕನೆಯ ಆರೋಪಿತರ ವಿರುದ್ಧ ಆರೋಪ ಸಾಬೀತಾದ ಕಾರಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿರುತ್ತಾರೆ.
ಆರೋಪಿತರಾದ A1. ಸತೀಶ್ ಬೈಕಂಪಾಡಿ A3. ಹರೀಶ್ ಬೈಕಂಪಾಡಿ A4. ಭಾಸ್ಕರ್ ಬೈಕಂಪಾಡಿ (ಈ 03 ಜನ ಆರೋಪಿಗಳು ಸಹೋದರರಾಗಿರುತ್ತಾರೆ.) ಇವರು ಪಣಂಬೂರು ಠಾಣಾ ವ್ಯಾಪ್ತಿಯ ಮೀನಕಳಿಯ ವಾಸಿಗಳಾಗಿದ್ದು, ಹಾಗು ಮತ್ತೊಬ್ಬ ಆರೋಪಿ A2 ಪುಷ್ಪರಾಜ್ ಈತನು ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದವನಾಗಿರುತ್ತಾನೆ. ಸದರಿ ಎಲ್ಲಾ 04 ಜನ ಆರೋಪಿಗಳಿಗೆ ಗೌರವಾನ್ವಿತ ನ್ಯಾಯಾಧೀಶರಾದ ಜಗದೀಶ್. ವಿ ಎನ್ ರವರು ಶಿಕ್ಷೆಯನ್ನು ಪ್ರಕಟಿಸಿ ಆದೇಶಿಸಿರುತ್ತಾರೆ.
ಆರೋಪಿಗಳಾದ ಎ-1 ಆರೋಪಿ ಸತೀಶ್ ಬೈಕಂಪಾಡಿ(57 ವರ್ಷ), ಎ-3 ಆರೋಪಿ ಹರೀಶ್ ಬೈಕಂಪಾಡಿ(61 ವರ್ಷ), ಎ-4. ಆರೋಪಿ ಭಾಸ್ಕರ್ ಬೈಕಂಪಾಡಿ(63 ವರ್ಷ) ರವರುಗಳಿಗೆ ಕಲಂ:302, 120, 109 ಜೊತೆ 34 ಐಪಿಸಿ ರಲ್ಲಿ ಜೀವಾವಧಿ ಶಿಕ್ಷೆ ಮತ್ತು ₹.15 ಸಾವಿರ ದಂಡ ವಿಧಿಸಿರುವುದಾಗಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ವರ್ಷ ಹೆಚ್ಚುವರಿ ಸಾದಾಶಿಕ್ಷೆ ಮತ್ತು ಪ್ರಕರಣದಲ್ಲಿ ಎ-2 ಆರೋಪಿ ಪುಷ್ಪರಾಜ್ (47 ವರ್ಷ ) ಎಂಬಾತನಿಗೆ ಕಲಂ:302, 120, ಜೊತೆ 34 ಐಪಿಸಿ ರಲ್ಲಿ ಜೀವಾವಧಿ ಶಿಕ್ಷೆ ಮತ್ತು ₹.15,000 ದಂಡ ಪಾವತಿಸಲು ತಪ್ಪಿದ್ದಲ್ಲಿ 1 ವರ್ಷ ಹೆಚ್ಚುವರಿ ಸಾದಾಶಿಕ್ಷೆ ಹಾಗು ಕಲಂ 201 r/w 34 IPC ಕಲಂನಡಿ ಎಲ್ಲಾ ಆರೋಪಿತರಿಗೆ ಎರಡು ವರ್ಷ ಸಾದಾ ಶಿಕ್ಷೆ ಮತ್ತು ತಲಾ ₹.1000 ದಂಡ, ದಂಡ ಪಾವತಿಸಲು ತಪ್ಪಿದರೆ ಒಂದು ತಿಂಗಳ ಹೆಚ್ಚುವರಿ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿರುತ್ತಾರೆ. ಮುಂದುವರೆದು 60000/- ರೂಪಾಯಿ ವಿಧಿಸಿದ ದಂಡದ ಪೈಕಿ ರೂ 50000/- ನ್ನು ಪರಿಹಾರವಾಗಿ ಮೃತನ ಮಗಳಿಗೆ ಮತ್ತು 16000/- ರೂ ನ್ನು ಸರ್ಕಾರಕ್ಕೆ ಪಾವತಿಸಲು ಆದೇಶಿಸಲಾಗಿದೆ. ಕೃತ್ಯಕ್ಕೆ ಬಳಸಿದ ಆರೋಪಿತರಿಗೆ ಸೇರಿದ ಬೊಲೆರೋ, ರೀಡ್ಝ್ ಹಾಗೂ ಮಾರುತಿ ಕಾರನ್ನು ವಶಕ್ಕೆ ಪಡೆದು ಸರ್ಕಾರಕ್ಕೆ ಮುಟ್ಟಗೋಲು ಹಾಕಲು ಆದೇಶಿರುತ್ತೆ.
ಮಾನ್ಯ ನ್ಯಾಯಾಲಯದ ಆದೇಶದಂತೆ 04 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆಯನ್ನು ಪಣಂಬೂರು ಪೊಲೀಸ್ ಠಾಣೆಯ ಅಗಿನ ಪೊಲೀಸ್ ನಿರೀಕ್ಷಕರುಗಳಾದ ಎನ್.ಆರ್ ಮುಕ್ರಿ, ಭಾಸ್ಕರ್ ರೈ, ರವೀಶ್ ನಾಯಕ್ ರವರುಗಳು ಭಾಗಶಃ ತನಿಖೆ ನಡೆಸಿದ್ದು, ಶ್ರೀ ಲೋಕೇಶ್ ಎ.ಸಿ ತನಿಖೆ ಪೂರೈಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿರುತ್ತಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ ನಾಯಕ ರವರು ವಾದ ಮಂಡಿಸಿರುತ್ತಾರೆ.