ಬೆಳ್ತಂಗಡಿ: ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾಡಿ ಗ್ರಾಮದ
ಗುರಿಪಳ್ಳ ನಿವಾಸಿ ಶ್ರೀಧರ ನಾಯ್ಕ ಎಂಬವರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಹಗಲು ಹೊತ್ತು ಮನೆಯ ಹಂಚು ತೆಗೆದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಜೂ. 20ರಂದು ನಡೆದಿದೆ.
ಮನೆಯಲ್ಲಿ ಒಟ್ಟು ನಾಲ್ಕು ಮಂದಿ ಇದ್ದು
ಶ್ರೀಧರ ಅವರು ಕಾರ್ಯಕ್ರಮವೊಂದಕ್ಕೆ ತೆರಳಿದ್ದರು.ಇತರರು ಕೆಲಸಕ್ಕೆಂದು ಮನೆಯಿಂದ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಕಳ್ಳರು ಹಂಚು ತೆಗೆದು ಒಳನುಗ್ಗಿದ್ದು ಮನೆಯಲ್ಲಿ ಇದ್ದ ಕಪಾಟಿನ ಬೀಗ ಮುರಿದು ಸುಮಾರು 10 ಲಕ್ಷ ರೂ.ಗಿಂತ ಅಧಿಕ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. ಚಾವಣಿಯ ಹಂಚು ತೆಗೆದು ಒಳ ನುಗ್ಗಿದ ಕಳ್ಳರು ಬಳಿಕ ಹಂಚನ್ನು ಹಾಗೆ ಇಟ್ಟು ಹಿಂಭಾಗಲಿನ ಮೂಲಕ ಪರಾರಿಯಾಗಿದ್ದಾರೆ. ಶ್ರೀಧರ ಅವರ ಮನೆ ಉಜಿರೆ-ಗುರಿಪಳ್ಳ ರಸ್ತೆಯ ಬದಿಯಲ್ಲೇ ಇದ್ದು ಇಲ್ಲಿ ಜನ- ವಾಹನ ಓಡಾಟವಿದ್ದರೂ ಹಾಡುಹಗಲೇ ಕಳ್ಳತನ ನಡೆದಿದೆ.
ಸ್ಥಳಕ್ಕೆ ಬೆಳ್ತಂಗಡಿ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.










