
ಬೆಳ್ತಂಗಡಿ, ಆ. 6 ತಾಲೂಕಿನ ಕೊಯ್ಯೂರು ಗ್ರಾಮದ ಕೋಡಿಬೆಟ್ಟು ಪ್ರದೇಶಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ, ಇತ್ತೀಚಿನ ಭಾರೀ ಮಳೆಯಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದರು.
ಕೋಡಿಬೆಟ್ಟು ನಿವಾಸಿ ಹೈದರ್ ಅವರ ಮನೆಗೆ ಮರ ಬಿದ್ದ ಪರಿಣಾಮ ಕುಡಿಯುವ ನೀರಿನ ಟ್ಯಾಂಕ್ ಸಂಪೂರ್ಣವಾಗಿ ಹಾನಿಗೊಳಗಾಗಿತ್ತು. ಈ ಹಿನ್ನೆಲೆಯಲ್ಲಿ ಬೆಸ್ಟ್ ಫೌಂಡೇಶನ್ ವತಿಯಿಂದ ಅವರಿಗೆ ಹೊಸ ನೀರಿನ ಟ್ಯಾಂಕ್ ವಿತರಿಸಿ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪೆರ್ನಾಂಡಿಸ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಗೌಡ, ಪಕ್ಷದ ಮುಖಂಡ ಮಹಮ್ಮದ್ ಸಿದ್ದೀಕ್ ಮಲೆಬೆಟ್ಟು ಭೂತ್ ಸಮಿತಿ ಅಧ್ಯಕ್ಷ ಸಲೀಂ ಪಾತ್ರಾಲಾ, ಬೆಳ್ತಂಗಡಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ ಲೋಬೊ ಹಾಗೂ ನವೀನ್ ಗೌಡ ಉಪಸ್ಥಿತರಿದ್ದರು.
ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ ರಕ್ಷಿತ್ ಶಿವರಾಂ, ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಅಗತ್ಯ ನೆರವು ತಲುಪಿಸುವ ನಿಟ್ಟಿನಲ್ಲಿ ತಮ್ಮಿಂದ ಸಾಧ್ಯವಾದ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.










