ಬೆಳ್ತಂಗಡಿ; ಕಾರ್ಮಿಕರ ನ್ಯಾಯಕ್ಕಾಗಿ ಅಂಬೇಡ್ಕರ್ ನಿರಂತರ ಹೋರಾಟ ನಡೆಸಿ, ನ್ಯಾಯ ಒದಗಿಸಿ ಕೊಟ್ಟಿದ್ದಾರೆ. ಅವರ ಹೋರಾಟದ ಫಲವಾಗಿ ನಾವು ಇಂದು ಕಾರ್ಮಿಕರ ದಿನವನ್ನು ಆಚರಿಸಲು ಸಾಧ್ಯವಾಗಿದೆ. ಕಾರ್ಮಿಕರು ಅಂಬೇಡ್ಕರ್ ಅವರನ್ನು ಪ್ರತಿ ಸಂದರ್ಭದಲ್ಲೂ ನೆನೆಯಬೇಕು. ಅಂಬೇಡ್ಕರ್ ಒಂದು ಜಾತಿಗೆ ಸೀಮಿತವಾಗಬಾರದು. ಅಂಬೇಡ್ಕರ್ ಎಲ್ಲರಿಗೂ ನ್ಯಾಯ ಒದಗಿಸಿದ ಮಹಾನ್ ಜ್ಞಾನಿ, ಭಾರತದ ಅಮೂಲ್ಯ ರತ್ನ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಕಂಕನಾಡಿ ಹೇಳಿದರು.
ಅವರು ಪಟ್ಟಣ ಮತ್ತು ಗ್ರಾಮ ಪಂಚಾಯತ್ ಪೌರಕಾರ್ಮಿಕರ ಸಂಘ ದಕ್ಷಿಣ ಕನ್ನಡ ಜಿಲ್ಲೆ ಇದರ ನೇತೃತ್ವದಲ್ಲಿ ಬೆಳ್ತಂಗಡಿ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ/ ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಮತ್ತು ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ , ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ ಮಾತನಾಡಿ, ಕಾರ್ಮಿಕರ ಬಗ್ಗೆ ಅನುಕಂಪ ಬೇಡ ಅವರಿಗೂ
ವಿವಿಧ ಕ್ಷೇತ್ರಗಳಲ್ಲಿ ಗುರುತಿಸಲು ಅವಕಾಶ ನೀಡಿ. ಕಾರ್ಮಿಕರ ಶ್ರಮದಿಂದ ದೇಶ ನಿರ್ಮಾಣ ಆಗಿದೆ. ಕಾರ್ಮಿಕರ ವರ್ಗದವರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು. ಅಂಬೇಡ್ಕರ್ ರವರು ದುಡಿಯುವ ವರ್ಗಕ್ಕೆ ಹಲವಾರು ಕಾನೂನುಗಳನ್ನು ಸಂವಿಧಾನದ ಮೂಲಕ ರೂಪಿಸಿದ್ದಾರೆ ಎಂದರು.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ ಮಾತನಾಡಿ ಅಂಬೇಡ್ಕರ್ ರವರ ಚಿಂತನೆ , ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಜೊತೆಗೆ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡಬೇಕು ಎಂದ ಅವರು ಪೌರ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಪೌರ ಕಾರ್ಮಿಕರ ಮಕ್ಕಳಾದ ಗಗನ್ ಕುಮಾರ್, ಹರ್ಷಿತಾ, ಕೀರ್ತನಾ, ಶ್ರಾವ್ಯ, ಧನುಶ್ರೀ, ಕಿರಣ್ ಹಾಗೂ ಹರಿಣಾಕ್ಷಿ ಅವರನ್ನು ಸನ್ಮಾನಿಸಲಾಯಿತು.
ಪಟ್ಟಣ ಮತ್ತು ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ, ಸುರೇಶ್ ಸುದೆಮುಗೇರು ಅಧ್ಯಕ್ಷತೆ ವಹಿಸಿದ್ದರು. ಪೌರ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಎಸ್.ಪಿ., ದಸಂಸ (ಅಂಬೇಡ್ಕರ್ ವಾದ) ಮೈಸೂರು ವಿಭಾಗ ಸಂ.ಸಂಚಾಲಕ ಬಿ.ಕೆ ವಸಂತ , ದಸಂಸ (ಅಂಬೇಡ್ಕರ್ ವಾದ) ಬೆಳ್ತಂಗಡಿ ತಾಲೂಕು ಘಟಕ ಸಂಚಾಲಕ ರಮೇಶ್ ಆರ್ , ಗ್ರಾಮ ಪಂಚಾಯತ್ ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ರೇಣುಕಾ , ಸಫಾಯಿ ಕರ್ಮಚಾರಿ ಸಂಘದ ಜಿಲ್ಲಾಧ್ಯಕ್ಷ ಪ್ರೇಮ್ ಬಲ್ಲಾಳ್ ಬಾಗ್ ಉಪಸ್ಥಿತರಿದ್ದರು ಸಂಘದ ಗೌರವ ಸಲಹೆಗಾರ ಶೇಖರ್ ಲಾಯಿಲಾ ನಿರೂಪಿಸಿ , ಧನ್ಯವಾದವಿತ್ತರು. ಪಟ್ಟಣ ಪಂಚಾಯತ್ ಚಾಲಕ ಶಿವಕುಮಾರ್ ಸ್ವಾಗತಿಸಿದರು.
