
ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿ ಅವರ ಗಡಿಪಾರು ಆದೇಶ ಮಾಡಲು ಸಹಾಯಕ ಆಯುಕ್ತರ ನ್ಯಾಯಾಲಯ ಪುತ್ತೂರು ಉಪ ವಿಭಾಗಕ್ಕೆ ಬಂಟ್ವಾಳ ಡಿ.ವೈ.ಎಸ್. ಪಿ ಅವರು ಸುಳ್ಳು ವರದಿ ಸಲ್ಲಿಸಿದ್ದು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ನೀತಿ ತಂಡದ ಜಯಂತ್ ಟಿ ಅವರು ಕರ್ನಾಟಕ ಲೋಕಾಯುಕ್ತಕ್ಕೆ, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ, ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ.
ಮಹೇಶ್ ಶೆಟ್ಟಿ ಅವರ ಗಡಿಪಾರು ಪ್ರಕರಣದ ವಿಚಾರಣೆವೇಳೆ ಬಂಟ್ವಾಳ ಡಿ ವೈ.ಎಸ್.ಪಿ ಅವರು ಪುತ್ತೂರು ಸಹಾಯಕ ಕಮಿಷನರ್ ಅವರ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಗಳನ್ನು ಉಲ್ಲೇಘಿಸಿ ದೂರು ನೀಡಲಾಗಿದೆ.ಮಹೇಶ್ ಶೆಟ್ಟಿ ಅವರನ್ನು ಗಡಿಪಾರು ಮಾಡುವಂತೆ ಮಾಡುವ ನಿಟ್ಟಿನಲ್ಲಿ ಪ್ರಭಾವ ಬೀರಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಮಹೇಶ್ ಶೆಟ್ಟಿ ಅವರ ವಿರುದ್ದ 26ಪ್ರಕರಣಗಳಿದ್ದು ಅದರಲ್ಲಿ16, ಪ್ರಕರಣಗಳು ಈಗಾಗಲೆ ಖುಲಾಸೆಗೊಂಡಿದೆ ಎಂದು ಮಾಹಿತಿ ನೀಡಿರುವ ಜಯಂತ್ ಬಂಟ್ವಾಳ ಡಿವೈ.ಎಸ್.ಪಿ ಅವರು ಯಾವುದೇ ಸಮರ್ಪಕವಾದ ದಾಖಲೆಗಳನ್ನು ನೀಡದೆ ನ್ಯಾಯಾಲಯದಲ್ಲಿ ಖುಲಾಸೆಯಾದ ಪ್ರಕರಣಗಳ ಬಗ್ಗೆ ಲಿಖಿತವಾದ ಹೇಳಿಕೆಗಳನ್ನು ನೀಡಿದ್ದು ಇದು ನ್ಯಾಯಾಂಗಕ್ಕೆ ಮಾಡಿರುವ ನಿಂದನೆಯಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಇದಲ್ಲದೆ ಇನ್ನೂ ಹಲವು ಆರೋಪಗಳನ್ನು ಮಾಡಿದ್ದಾರೆ.
ಗಡಿಪಾರು ಪ್ರಕರಣದ ವಿಚಾರಣೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇದರ ನಡುವೆಯೇ ಜಯಂತ್ ಸಾಮಾಜಿಕ ಜಾಲತಾಣಗಳಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ ವಿರುದ್ದ ಹಲವು ಆರೋಪಗಳನ್ನು ಮಾಡಿ ವಿಡಿಯೋ ಒಂದನ್ನು ಹಾಕಿದ್ದು ಈಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲಿಸಲಾಗಿದೆ. ಒಟ್ಟಾರೆಯಾಗಿ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಪ್ರಕರಣದಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ನೀಡುವ ತೀರ್ಪು ಇದೆಲ್ಲ ವಿವಾದಗಳಲ್ಲಿಯೂ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.