
ಬೆಂಗಳೂರು: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಮುವಾದಿ ಪಿತೂರಿಗಳನ್ನು ನಡೆಸಲು ಸಂಶಯಾಸ್ಪದ ವಿದೇಶಿ ದೇಣಿಗೆಯನ್ನು ಬಳಸಲಾಗಿದೆ ಎಂಬ ಆರೋಪಗಳ ಕುರಿತು ಜಾರಿ ನಿರ್ದೇಶನಾಲಯ ಪ್ರಾಥಮಿಕ ತನಿಖೆಗೆ ಚಾಲನೆ ನೀಡಿದೆ ಎಂದು ಮಂಗಳವಾರ ಅಧಿಕೃತ ಮೂಲಗಳು ತಿಳಿಸಿವೆ.
ಧರ್ಮಸ್ಥಳದ ಸುತ್ತ ವಿವಾದ ಹಬ್ಬಿಸಲು ಸಂಶಯಾಸ್ಪದ ದೇಣಿಗೆಯನ್ನು ಬಳಸಿವೆ ಎಂಬ ಆರೋಪಕ್ಕೆ ಗುರಿಯಾಗಿರುವ ಕೆಲವು ಸರಕಾರೇತರ ಸಂಸ್ಥೆಗಳು ಸೇರಿದಂತೆ ಎಲ್ಲ ಸಂಸ್ಥೆಗಳು, ವ್ಯಕ್ತಿಗಳಿಗೆ ಸಂಬಂಧಿಸಿದ ವಾಸ್ತವಾಂಶಗಳು ಹಾಗೂ ದಾಖಲೆಗಳನ್ನು ಜಾರಿ ನಿರ್ದೇಶನಾಲಯ ಸಂಗ್ರಹಿಸುತ್ತಿದೆ ಎಂದು ಈ ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಹಾಗೂ ಇನ್ನೂ ಕೆಲವು ಸೆಕ್ಷನ್ ಗಳಡಿ ಜಾರಿ ನಿರ್ದೇಶನಾಲಯ ಪ್ರಾಥಮಿಕ ತನಿಖೆಗೆ ಚಾಲನೆ ನೀಡಿದ್ದು, ಒಂದು ವೇಳೆ ವಿದೇಶಿ ದೇಣಿಗೆ ನಿಯಮಗಳ ಉಲ್ಲಂಘನೆ ಹಾಗೂ ದೇಣಿಗೆಗಳ ಅಕ್ರಮ ಬಳಕೆಯ ಬಗ್ಗೆ ಪುರಾವೆ ದೊರೆತರೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಈ ಮೂಲಗಳು ತಿಳಿಸಿವೆ.
ನಾನು 1995ರಿಂದ 2014ರ ನಡುವೆ ಧರ್ಮಸ್ಥಳ ದೇವಾಸ್ಥಾನದಲ್ಲಿ ಉದ್ಯೋಗಿಯಾಗಿದ್ದಾಗ, ಲೈಂಗಿಕ ದೌರ್ಜನ್ಯದ ಕುರುಹುಗಳಿದ್ದ ಕೆಲವು ಮಹಿಳೆಯರು ಹಾಗೂ ಮಕ್ಕಳ ಮೃತದೇಹಗಳು ಸೇರಿದಂತೆ ಹಲವಾರು ಮೃತದೇಹಗಳನ್ನು ನನ್ನಿಂದ ಬಲವಂತವಾಗಿ ಹೂತು ಹಾಕಲಾಗಿತ್ತು ಎಂದು ಮಾಜಿ ಪೌರ ಕಾರ್ಮಿಕ ಚಿನ್ನಯ್ಯ ಆರೋಪಿಸಿದ ನಂತರ, ಧರ್ಮಸ್ಥಳದ ಸುತ್ತ ವಿವಾದ ಭುಗಿಲೆದ್ದಿತ್ತು.