
ಬೆಳ್ತಂಗಡಿ; ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಲ್ಪಾಡಿ ಎಂಬಲ್ಲಿ ನಡೆದ ಮಂಗಳೂರು ಮೂಲದ ನವೀನ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬೆಳ್ತಂಗಡಿ ತಾಲೂಕು ನಡ ನಿವಾಸಿ ಸಂಜೀವ ಗೌಡ ಎಂಬವರ ಮಗ ಪರೀಕ್ಷಿತ್(44) ಎಂಬಾತನನ್ನು ಪೊಲೀಸರು ಆಗಸ್ಟ್ 26 ರಂದು ಬಂಧಿಸಿದ್ದಾರೆ.
ಪರೀಕ್ಷಿತ್‌ಗೆ ಪರಿಚಯ ಇದ್ದ ಮಹಿಳೆ ಜೊತೆ ನವೀನ್ ಪೂಜಾರಿ ಗೆಳೆತನವನ್ನು ಬೆಳೆಸಿ ಆತ್ಮೀಯರಾಗಿದ್ದರು. ಈ ವಿಚಾರವಾಗಿ ಇವರ ಮಧ್ಯೆ ಜಗಳ ನಡೆದಿದ್ದು, ಇದುವೇ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ.
ಮಂಗಳವಾರ ಬೆಳಗಿನ ಜಾವ ನವೀನ್ ಪೂಜಾರಿ ಮೃತದೇಹವು ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದು, ತನಿಖೆ ನಡೆಸಿದಾಗ ಅವರನ್ನು ಪರೀಕ್ಷಿತ್ ಎಂಬಾತ ಕೊಲೆ ಮಾಡಿರುವುದು ತಿಳಿದುಬಂದಿದೆ ಅದರಂತೆ ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.