
ಬೆಳ್ತಂಗಡಿ; ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ಸ್ಪಷ್ಟವಾದ ಬಹುತದೊಂದಿಗೆ ಗೆಲುವನ್ನು ಪಡೆಯಲಿದೆ ತುಳುನಾಡಿನಿಂದ ಕನಿಷ್ಟ ಹತ್ತು ಮಂದಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಅವರು ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ರಕ್ಷಿತ್ ಶಿವರಾಂ ಅವರ ನೇತೃತ್ವದಲ್ಲಿ ಗುರುವಾಯನಕೆರೆಯಲ್ಲಿ ನಡೆದ ಸರಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಇದು ರಾಜ್ಯದ ಸಾಮಾನ್ಯ ಜನರಿಗೆ ಶಕ್ತಿ ತುಂಬುವ ಕಾರ್ಯಕ್ರಮಗಳಾಗಿದ್ದು ಕಾಂಗ್ರೆಸ್ ಕಾರ್ಯಕರ್ತರು ಸರಕಾರದ ಕಾರ್ಯಕ್ರಮ ಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು. ರಾಜ್ಯದ ಜನತೆ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸವಿದೆ ಇದನ್ನು ಕಳೆದ ಉಪ ಚುನಾವಣೆಯಲ್ಲಿ ನೋಡಿದ್ದೇವೆ ಬಿಜೆಪಿ ಜನತಾದಳದ ಕೋಟೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಗಿದೆ. ಕರಾವಳಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೆ ಹಿಂಜರಿಕೆ ನಿರಾಸೆ ಬೇಡ ಮುಂದಿನ ಚುನಾವಣೆಯಲ್ಲಿ ಗೆಲುವು ನಿಮ್ಮದೇ ಆಗಲಿದೆ ಎಂದರು.
ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿದ್ದು ಕಾರ್ಯಕರ್ತರು ಆತ್ಮವಿಶ್ವಾಸದಿಂದ ಚುನಾವಣೆ ಎದುರಿಸಬಹುದಾಗಿದೆ. ಸರಕಾರದ ಸಾಧನೆಗಳೇ ಕಾಂಗ್ರೆಸ್ ಪಕ್ಷಕ್ಕೆ ಶ್ರೀರಕ್ಷೆಯಾಗಿದೆ ಎಂದರು. ಕಾಂಗ್ರೆಸ್ ಪಕ್ಷ ಜನರ ಬದುಕನ್ನು ಕಟ್ಟುವ ಕಾರ್ಯಾ ಮಾಡಿದೆ ಆದರೆ ಬಿಜೆಪಿ ಜನರ ಭಾವನೆಗಳೊಂದಿಗೆ ಆಟವಾಡುವ ಕಾರ್ಯ ಮಾಡಿದೆ ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅಧಿಕಾರದಲ್ಲಿ ಯಾರೂ ಶಾಶ್ವತವಲ್ಲ ಆದರೆ ಜಮರ ಹೃದಯ ಗೆಲ್ಲುವ ಕಾರ್ಯ ಮಾಡೋಣ ಎಂದರು.

ಸಮಾವೇಶವನ್ನು ಉದ್ದೇಶಿಸಿ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಖ್ಯಾತ ವಾಗ್ಮಿ ನಿಕೇತ್ ರಾಜ್ ಮೌರ್ಯ ಬೆಳ್ತಂಗಡಿ ಯಲ್ಲಿ ಕಾಂಗ್ರೆಸ್ ನ ಶಕ್ತಿಯ ನ್ನು ನೋಡಿ ಭಯಗೊಂಡು ಬ್ಯಾನರ್ ಹರಿದು ಹಾಕುವ ಕಾರ್ಯ ಮಾಡಿದ್ದಾರೆ ಆದರೆ ಗ್ಯಾರಂಟಿ ಯೋಜನೆಯ ಮೂಲಕ ರಾಜ್ಯದ ಜನರ ಹೃದಯ ಗಳಲ್ಲಿ ಕಟ್ಟಿರುವ ಬ್ಯಾನರ್ ಹರಿಯಲು ಯಾರಿಗೂ ಸಾಧ್ಯವಿಲ್ಲ ಎಂದರು.
ಜಾತಿ ಧರ್ಮದ ನೆಪದಲ್ಲಿ ದೇಶವನ್ನು ಒಡೆಯುವ ಕಾರ್ಯಕ್ಕೆ ಬಿಜೆಪಿ ಮುಂದಾಗಿದೆ ಸಂವಿಧಾನವನ್ನು ಮುಂದಿಟ್ಟು ಅದನ್ನು ಎದುರಿಸುವ ಕಾರ್ಯ ಮಾಡಬೇಕು ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡ ಸುಧೀರ್ ಕುಮಾರ್ ಮೂರಳ್ಳಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರುಗಳಾದ ಬಿ ರಮಾನಾಥ ರೈ, ಅಭಯ ಚಂದ್ರ ಜೈನ್, ವಿನಯಕುಮಾರ್ ಸೊರಕೆ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಪದ್ಮರಾಜ್ ಆರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪಕ್ಷದ ಮುಖಂಡರು ಗಳಾದ ಎಂ.ಎಸ್ ಮೊಹಮ್ಮದ್, ಸತೀಶ್ ಕುಮಾರ್ ಕಾಶೀಪಟ್ಣ, ನಾಗೇಶ್ ಕುಮಾರ್ ಗೌಡ ಉಮ್ಮರ್ ಕುಂಞಿ ಮುಸ್ಲಿಯಾರ್, ಶೇಖರ ಕುಕ್ಕೇಡಿ, ಪದ್ಮನಾಭ ಸಾಲಿಯಾನ್, ಇಬ್ರಾಹಿಂ ನವಾಜ್, ಸೆಬಾಸ್ಟಿಯನ್ ಕಳೆಂ, ಕರೀಂ ಗೇರುಕಟ್ಟೆ, ವಂದನಾ ಭಂಡಾರಿ, ನಮಿತ ಪೂಜಾರಿ, ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು. ಕೆಪಿಸಿಸಿ ಕಾರ್ಯದರ್ಶಿ
ರಕ್ಷಿತ್ ಶಿವರಾಂ ಸ್ವಾಗತಿಸಿದರು. ಸಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು.
