



ಬೆಳ್ತಂಗಡಿ; ಬೆಂಗಳೂರಿನ ನಾಗರಬಾವಿ ಟೀಚರ್ಸ್ ಕಾಲೊನಿಯ ಮಾನಸ ನಗರದ ನಿವಾಸಿ ಆರ್.ವರ್ಷಾ ಅವರು ಪತಿ ( ಧರ್ಮಸ್ಥಳ ಪಿಎಸ್‌ಐ ಪಿ.ಕಿಶೋರ್) ಸೇರಿದಂತೆ ನಾಲ್ವರ ವಿರುದ್ಧ ವರದಕ್ಷಿಣೆಗಾಗಿ ಕಿರುಕುಳ ನೀಡಿದ ಕುರಿತು ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ದೂರು ದಾಖಲಾದ ಬೆನ್ನಲ್ಲಿಯೇ ಪಿಎಸ್.ಐ ಕಿಶೋರ್ ಅವರು ರಜೆಯಲ್ಲಿ ತೆರಳಿರುವುದಾಗಿ ತಿಳಿದು ಬಂದಿದೆ.
ಈತ ವರದಕ್ಷಿಣೆ ತರುವಂತೆ ಪದೇ ಪದೇ ಹಿಂಸೆ ನೀಡಿ, ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ’ ಎಂದು ಅವರ ಪತ್ನಿ ಆರೋಪಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕಿಶೋರ್, ಅವರ ತಂದೆ ಪುಟ್ಟಚನ್ನಪ್ಪ, ತಾಯಿ ಸರಸ್ವತಮ್ಮ, ಸಹೋದರ ಪಿ.ಚಂದನ್ ವಿರುದ್ಧ ಸೋಮವಾರ ಎಫ್‌ಐಆರ್ ದಾಖಲಾಗಿತ್ತು.
ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದಾಗಿ ತಿಳಿದು ಬಂದಿದ್ದು ಪ್ರಕರಣವನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಈ ಮಧ್ಯೆ ಆರೋಪ ಎದುರಿಸುತ್ತಿರುವ ಪಿ.ಎಸ್.ಐ ಪಿ.ಕಿಶೋರ್ ಅವರು ಫೆ.24ರಿಂದ ರಜೆಯಲ್ಲಿ ತೆರಳಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದು ಅವರು ಕರ್ತವ್ಯಕ್ಕೆ ಮರಳಿದ ಬಳೊಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ತನಿಖೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.
