Home ರಾಷ್ಟ್ರ/ರಾಜ್ಯ ಧರ್ಮಸ್ಥಳ ; ಸೌಜನ್ಯ‌ ಅತ್ಯಾಚಾರ ಕೊಲೆ‌ಪ್ರಕರಣದ ಬಗ್ಗೆ ಸಮೀರ್ ವೀಡಿಯೋ ಡಿಲೀಟ್ ಮಾಡಲು ನ್ಯಾಯಾಲಯ ಆದೇಶ

ಧರ್ಮಸ್ಥಳ ; ಸೌಜನ್ಯ‌ ಅತ್ಯಾಚಾರ ಕೊಲೆ‌ಪ್ರಕರಣದ ಬಗ್ಗೆ ಸಮೀರ್ ವೀಡಿಯೋ ಡಿಲೀಟ್ ಮಾಡಲು ನ್ಯಾಯಾಲಯ ಆದೇಶ

29
0

ಬೆಂಗಳೂರು: ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕುರಿತಂತೆ ಪ್ರಕಟವಾಗಿದ್ದ ಯೂಟ್ಯೂಬ್ ವಿಡಿಯೋವನ್ನು ಯೂಟ್ಯೂಬ್ ನಿಂದ ಡಿಲಿಟ್ ಮಾಡುವಂತೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಎ.ಎಸ್‌.ಸುಕೇಶ್‌ ಮತ್ತು ಶೀನಪ್ಪ ಎಂಬವರು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.

ಅಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಎಂ.ಡಿ.ಸಮೀರ್‌ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕ್ಷೇತ್ರದ ಧರ್ಮಾಧಿಕಾರಿಯಾಗಿರುವ ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬಸ್ಥರ ವಿರುದ್ಧವಾಗಿ ಯಾವುದೇ ತರಹದ ಆಧಾರರಹಿತ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್​ ನಿರ್ಬಂಧಕಾಜ್ಞೆ ವಿಧಿಸಿ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ”ಸಮೀರ್‌ ಮಾಡಿರುವ ವಿಡಿಯೋಗೆ ಅರ್ಜಿದಾರರ ವಿರುದ್ಧವಾಗಿರುವವರು ಪ್ರಾಯೋಜಕತ್ವ ವಹಿಸಿದ್ದಾರೆ. ಸಂವಿಧಾನದ 19(1)(ಎ) ವಿಧಿಯಡಿ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಲಭ್ಯವಿದ್ದರೂ ಸಂವಿಧಾನದ 19(2)ನೇ ವಿಧಿ ಅಡಿ ಪರಿಪೂರ್ಣವಲ್ಲ. ಸಕಾರಣಗಳಿದ್ದಾಗ ಅದರ ಮೇಲೆ ನಿರ್ಬಂಧ ವಿಧಿಸಬಹುದಾಗಿದ್ದು, ಮಾನಹಾನಿಯಂತಹ ಸಂದರ್ಭದಲ್ಲಿ ನಿರ್ಬಂಧಿಸಬಹುದಾಗಿದೆ. ಸಮೀರ್‌ ವಿಡಿಯೋದಲ್ಲಿನ ವಿಷಯವು ಸುಳ್ಳಾಗಿದ್ದು, ಅದು ಮಾನಹಾನಿಯಾಗಿದೆ‌ ಎಂದು ಆಕ್ಷೇಪಿಸಿದ್ದರು.

ವಿಡಿಯೋ ಹಿನ್ನೆಲೆಯಲ್ಲಿ ಬಳ್ಳಾರಿ ಪೊಲೀಸರು ಯುಟ್ಯೂಬರ್​​ ಸಮೀರ್‌ ವಿರುದ್ಧ ಪ್ರಕರಣ ದಾಖಲಿಸಿ, ನೋಟಿಸ್‌ ಜಾರಿ ಮಾಡಿದ್ದರು. ಆದರೆ ಬಳಿಕ ಪೊಲೀಸ್‌ ನೋಟಿಸ್‌ ಮತ್ತು ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ ವಿಧಿಸಿ ಆದೇಶ ನೀಡಿತ್ತು.

ಈ ನಡುವೆ‌ ಸೌಜನ್ಯಳಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಪ್ರತಿಭಟನೆಯ ಬಗ್ಗೆ ತೀರ್ಮಾನಿಸಲು ಸಭೆ ನಡೆಸಲು ಅವಕಾಶ ನಿರಾಕರಿಸಿದ್ದ ಪೊಲೀಸರ ಸರ್ಕಾರದ ಕ್ರಮವನ್ನು ಬದಿಗಿರಿಸಿ, ಸಭೆ ನಡೆಸಲು ಹೈಕೋರ್ಟ್‌ ಅನುಮತಿ ನೀಡಿತ್ತು. ಇದರ ಬೆನ್ನಲ್ಲಿಯೇ ಹೋರಾಟ ಗಾರರು ಧರ್ಮಸ್ಥಳ ಚಲೋದಂತಹ ಹೋರಾಟ ಹಮ್ಮಿಕೊಳ್ಳಲು ಮುಂದಾಗಿದ್ದಾರೆ. ಇದರ ನಡುವೆ ವೀಡಿಯೋ ಡಿಲಿಟ್ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಇನ್ನು ಹೋರಾಟಗಳಿಗೆ ಅನುಮತಿ ಸಿಗಲಿದೆಯೇ ಎಂದು ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here