

ಬೆಳ್ತಂಗಡಿ; ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಜಿಲ್ಲಾ ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕ ದಕ್ಷಿಣ ಕನ್ನಡ, ತಾಲೂಕು ಅಭಿಯಾನ ನಿರ್ವಹಣಾ ಘಟಕ, ತಾಲೂಕು ಪಂಚಾಯತ್ ಬೆಳ್ತಂಗಡಿ, ನೇತ್ರಾವತಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ (ರಿ.)ಬೆಳ್ತಂಗಡಿ, ಸಂಗಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ(ರಿ.) ಕೊಕ್ಕಡ ಗ್ರಾಮ ಪಂಚಾಯತ್ ಇವುಗಳ ಜಂಟಿ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಂಜೀವಿನಿ ಸಂತೆ ಮಾರ್ಚ್ 15ರಂದು ಶನಿವಾರ ಕೊಕ್ಕಡದ ಸೌತಡ್ಕ ಶ್ರೀ ಮಹಾ ಗಣಪತಿ ದೇವಸ್ಥಾನದ ಆವರಣದಲ್ಲಿ ನಡೆಯಿತು.
ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೆ.ವಿ ಜಯರಾಮ್ ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು
ಕುಟುಂಬದ ಜವಾಬ್ದಾರಿಯೊಂದಿಗೆ ಸಮಾಜದ ಎಲ್ಲಾ ರಂಗದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸಂಜೀವಿನಿಯು ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಮಹಿಳೆಯರ ಸರ್ವಾಂಗೀಣ ಬೆಳವಣಿಗೆಗೆ ಕಟಿಬದ್ಧವಾಗಿದೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಂಜೀವಿನಿ ಸಂತೆಯನ್ನು ಉದ್ಘಾಟಿಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಮಾತನಾಡಿ ಬೆಳ್ತಂಗಡಿ ತಾಲೂಕಿನಲ್ಲಿ ಸ್ವಚ್ಛತೆ , ಕುಡಿಯುವ ನೀರು, ಲಿಂಗತ್ವ ವೇದಿಕೆ, ಘನತ್ಯಾಜ್ಯ ನಿರ್ವಹಣೆ ಮುಂತಾದ ಎಲ್ಲ ಕಾರ್ಯಕ್ಷೇತ್ರದಲ್ಲೂ ಸಂಜೀವಿನಿ ಸದಸ್ಯರ ತೊಡಗಿಸಿಕೊಳ್ಳುವಿಕೆಯನ್ನು ಶ್ಲಾಘಿಸಿ ಆಯೋಜನೆಗೊಂಡಿದ್ದ ಸಂಜೀವಿನಿ ಸಂತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಯುತ ಹರಿಪ್ರಸಾದ್ ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೇತ್ರಾವತಿ ತಾಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಮಧುರ ತಮ್ಮ ವೈಯಕ್ತಿಕ ಬೆಳವಣಿಗೆಯಲ್ಲಿ ಸಂಜೀವಿನಿ ಯೋಜನೆಯ ಕೊಡುಗೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯನಿರ್ಹಿಸುತ್ತಿರುವ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕೊಕ್ಕಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬೇಬಿ, ನೇತ್ರಾವತಿ ಸಂಜೀವಿನಿ ತಾಲೂಕ ಮಟ್ಟದ ಒಕ್ಕೂಟದ ಕಾರ್ಯದರ್ಶಿ ಗಿರಿಜಾ ಕೆದಿಲಾಯ, ಸಂಗಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ಕುಸುಮ, ಸೌತಡ್ಕ ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ವಿ ಶ್ರೀನಿವಾಸ್, ಪ್ರಭಾರ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ನಿತೀಶ್, ಕೊಕ್ಕಡ ಗ್ರಾಮ ಪಂಚಾಯತ್ ಅಭಿವೃದ್ಧಿ ದೀಪಕ್ ರಾಜ್ ಉಪಸ್ಥಿತರಿದ್ದರು.
ಸಂಜೀವಿನಿ ಸಂತೆಯಲ್ಲಿ 48 ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸದಸ್ಯೆಯರು ವಿವಿಧ ಬಗೆಯ ಮಾರಾಟ ಮಳಿಗೆಗಳನ್ನು ತೆರೆದು ಎರಡು ಲಕ್ಷಕ್ಕೂ ಅಧಿಕ ಮೊತ್ತದ ವಹಿವಾಟು ನಡೆಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು, ಸಂಜೀವಿನಿ ಸದಸ್ಯೆಯರು, ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದ ಪ್ರವಾಸಿಗರು ಉತ್ಸಾಹದಿಂದ ದಿನಪೂರ್ತಿ ಮಳಿಗೆಗಳಲ್ಲಿ ಖರೀದಿ ನಡೆಸಿದರು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವೇದಿಕೆಯಲ್ಲಿ ಸಂಜೀವಿನಿ ಮಹಿಳಾ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ, ನೃತ್ಯ ,ನಾಟಕ ನಡೆಯಿತು.
ಕಾರ್ಯಕ್ರಮದಲ್ಲಿ ತಾಲೂಕು ಅಭಿಯಾನ ನಿರ್ವಹಣಾ ಘಟಕದ ಎಲ್ಲಾ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು. ಶ್ರೀಕಲಾ ಇವರು ಪ್ರಾರ್ಥಿಸಿ, ಕೊಕ್ಕಡ ವಲಯ ಮೇಲ್ವಿಚಾರಕಿ ಶ್ರೀಮತಿ ವೀಣಾಶ್ರೀ ಕೆ.ಕೆ ಸ್ವಾಗತಿಸಿ, ಶಿಶಿಲ ಕೃಷಿ ಸಖಿ ವಸಂತಿ, ಶಿಬಾಜೆ ಎಲ್ ಸಿ ಆರ್ ಪಿ ಮಾಲತಿ, ಕಲ್ಮಂಜ ಎಂ ಬಿ ಕೆ ಪುಷ್ಪ ಕಾರ್ಯಕ್ರಮ ನಿರೂಪಿಸಿ,ವೇಣೂರು ಸುಲತ ಎಂ ಬಿ ಕೆ ಧನ್ಯವಾದವಿತ್ತರು.
ಮಧ್ಯಾಹ್ನದ ನಂತರ ಸಂಜೀವಿನಿ ಸದಸ್ಯೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
