
ಬೆಳ್ತಂಗಡಿ; ಕಸ್ತೂರಿ ರಂಗನ್ ವರದಿಯನ್ನು ಸಮರ್ಪಕವಾಗಿ ಮಾಡಲಾಗಿಲ್ಲ ಅದರಲ್ಲಿರುವ ವಿಚಾರಗಳು ವಾಸ್ತವದಿಂದ ದೂರವಾಗಿದೆ ಮೆಲೆನಾಡಿನ ಜನರ ಜೀವನವನ್ನು ಕಸಿದುಕೊಳ್ಳುವ ಈ ವರದಿಯನ್ನು ಸರಕಾರ ತಿರಸ್ಕರಿಸಬೇಕು ಎಂದು
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಒತ್ತಾಯಿಸಿದರು.
ಬೆಳ್ತಂಗಡಿಯ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆಯ ವತಿಯಿಂದ
ಕಸ್ತೂರಿ ರಂಗನ್ ವರದಿಯನ್ನು ಕೈಬಿಡುವಂತೆ ಒತ್ತಾಯಿಸಿ ನಡೆಸಲಾದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಸರಕಾರ ಯಾವುದೇ ಇರಲಿ ಅದು ಜನರ ಹಿತಕಾಯಬೇಕು ಕಾಂಗ್ರೆಸ್ ಸರಕಾರ ಇರಲಿ ಬಿಜೆಪಿ ಸರಕಾರ ಇರಲಿ ಜನರ ಬದುಕಿನೊಂದಿಗೆ ಚೆಲ್ಲಾಟವಾಡುವ ಕಾರ್ಯ ಮಾಡಿದರೆ ಅದನ್ನು ಜನರೊಂದಿಗೆ ನಿಂತು ವಿರೋಧಿಸುತ್ತೇನೆ. ಕಸ್ತೂರಿ ರಂಗನ್ ವರದಿ ಜನ ಹಿತಕ್ಕೆ ವಿರುದ್ದವಾಗಿದೆ. ಇದನ್ನು ಎಲ್ಲರೂ ವಿರೋಧಿಸಬೇಕು ಎಂದರು.

ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ ನ15ರಂದು ಗುಂಡ್ಯದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಆಯೋಜಿಸಲಾಗಿದ್ದು ಎಲ್ಲರೂ ಭಾಗವಹಿಸುವಂತೆ ಕರೆ ನೀಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಶಿರ್ಲಾಲು ಚರ್ಚಿನ ಧರ್ಮಗುರುಗಳಾದ ಫಾ ಮ್ಯಾಥ್ಯೂ, ನಿವೃತ್ತ ಪ್ರಾಂಶುಪಾಲರಾದ ಆಂಟನಿ, ರೈತ ಮುಖಂಡ ಪ್ರಶಾಂತ್, ಮಾತನಾಡಿದರು.
ಪ್ರತಿಭಟನೆಯಲ್ಲಿ ಸದಾನಂದ ಉಂಗಿಲ ಬೈಲು, ಗಣೇಶ್ ನಾವೂರು, ನವೀನ್ ಸಾಮಾನಿ,ಪಟ್ಟಣ ಪಂಚಾಯತು ಅಧ್ಯಕ್ಷ ಜಯಾನಂದ ಗೌಡ, ರಾಜೇಶ್ ಪೆರ್ಬುಂಡ ಹಾಗೂ ಸೋಯಿ ಪುದುವೆಟ್ಟು ಹಾಗೂ ಇತರರು ಇದ್ದರು.
ಪ್ರತಿಭಟನಾಕಾರರು ಕಸ್ತೂರಿ ರಂಗನ್ ವರದಿಯನ್ನು ಕೈಬಿಡುವಂತೆ ಒತ್ತಾಯಿಸಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

