Home ಸ್ಥಳೀಯ ಸಮಾಚಾರ ಬೆಳ್ತಂಗಡಿ; ಗುಡುಗು ಸಿಡಿಲು, ಗಾಳಿಯ ಅಬ್ಬರದೊಂದಿಗೆ ಸುರಿದ ಭಾರೀ ಮಳೆ

ಬೆಳ್ತಂಗಡಿ; ಗುಡುಗು ಸಿಡಿಲು, ಗಾಳಿಯ ಅಬ್ಬರದೊಂದಿಗೆ ಸುರಿದ ಭಾರೀ ಮಳೆ

0

ಬೆಳ್ತಂಗಡಿ: ತಾಲೂಕಿನಾದ್ಯಂತ ಬುಧವಾರ ಸಂಜೆಯ ವೇಳೆಗೆ ಸಿಡಿಲು ಗುಡುಗು, ಗಾಳಿಯೊಂದಿಗೆ ಅಬ್ಬರದಿಂದ ಮಳೆ ಸುರಿದಿದ್ದು ಕಳೆದ ಒಂದುವಾರದಿಂದ ಇದ್ದ ಬಿಸಿಯೇರಿದ ವಾತಾತವರಣವನ್ನು ತಂಪಾಗಿಸಿದೆ.
ಮಳೆಯೊಂದಿಗೆ ಭಾರೀ ಗಾಳಿಯೂ ಬೀಸಿದ್ದು
ತಾಲೂಕಿನ ಹಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ವಿದ್ಯುತ್ ಸಂಪರ್ಕ ಅಸ್ತ ವ್ಯಸ್ತಗೊಂಡಿದೆ. ಅಲ್ಲಲ್ಲಿ ಮರಗಳು ಮುರಿದು ಬಿದ್ದಿರುವುದಾಗಿ ತಿಳಿದು ಬಂದಿದೆ.
ಸಂಜೆ ಸುಮಾರು 5.30 ಗಂಟೆಯಿಂದ 6-30 ರವರೆಗೆ ಮಳೆ ಗುಡುಗು-ಸಿಡಿಲು, ಗಾಳಿ ಸಹಿತ ಸುರಿಯತೊಡಗಿತ್ತು. ತಾಲೂಕಿನ ಶಿಶಿಲ, ಅರಸಿನಮಕ್ಕಿ, ಧರ್ಮಸ್ಥಳ, ಮುಂಡಾಜೆ, ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ಬಳಂಜ, ಅಳದಂಗಡಿ, ಫಂಡಿಜೆ, ನಾರಾವಿ, ವೇಣೂರು ಪರಿಸರದಲ್ಲಿ ಉತ್ತಮ ಮಳೆ ಸುರಿದಿದೆ. ಉಜಿರೆ, ಮುಂಡಾಜೆ, ಕಕ್ಕಿಂಜೆ, ನಡ, ಧರ್ಮಸ್ಥಳ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದೆ.


ಮಳೆಯೊಂದಿಗೆ ಬೀಸಿದ ಗಾಳಿಗೆ ತಾಲೂಕಿನ ಹಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದಾಗಿ ತಿಳಿದು ಬಂದಿದೆ. ಕೊಯ್ಯೂರು, ಮಲೆಬೆಟ್ಟು, ಚಾರ್ಮಾಡಿ, ಕಾಶಿಬೆಟ್ಟು ಪ್ರದೇಶದಲ್ಲಿ ಗಾಳಿಯ ಅಬ್ಬರ ಹೆಚ್ಚಾಗಿತ್ತು. ವಿದ್ಯುತ್ ಕಂಬಗಳು ಧರಾಶಾಯಿಯಾಗಿರುವುದು ಕಂಡುಬಂದಿದೆ. ಗ್ರಾಮೀಣ ಭಾಗಗಳಲ್ಲಿನ ರಸ್ತೆಗಳ ಮೇಲೆ ಮರಗಳು ಬಿದ್ದಿವೆ. ಮಲೆಬೆಟ್ಟು, ಕೊಯ್ಯೂರು ಪ್ರದೇಶದಲ್ಲಿ ವಿಪರೀತ ಗಾಳಿ ಬೀಸಿದೆ. ತಾಲೂಕಿನ ಹಲವು ಪ್ರದೇಶಗಳಲ್ಲಿ ರಾತ್ರಿಯು ಮಳೆ ಮುಂದುವರಿದಿದೆ.


ಕಳೆದ ಹದಿನೈದು ದಿನಗಳಿಂದೀಚೆಗೆ ವಿಪರೀತ ಸೆಖೆಯ ವಾತಾವರಣ ಇತ್ತು. 41 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನವಿತ್ತು. ಜನರು ಮಳೆಗೆ ಕಾತರಿಸುತ್ತಿದ್ದರು. ಬುಧವಾರ ಸುರಿದ ಮಳೆಯಿಂದಾಗಿ ತಾಲೂಕು ತಂಪಾಗಿದೆ.
ಭಾರೀ ಮಳೆ ಹಾಗೂ ಗಾಳಿಯಿಂದಾಗಿ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬಹುತೇಕ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕತ್ತಲೆ ಆವರಿಸಿದೆ. ಹಲವೆಡೆ ರಾತ್ರಿಯೂ ಮಳೆ ನಿರಂತರವಾಗಿ ಮುಂದುವರಿದಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version