

ಬೆಳ್ತಂಗಡಿ : ‘ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆ ಹಾಗೂ ಭೂ ಪರಿವರ್ತನೆಯಾಗದೆ ಉಪವಿಭಜನೆ ಮಾಡಿ ನಿವೇಶನಗಳಾಗಿ ಮಾರಾಟ ಮಾಡಿರುವ ನಿವೇಶನ ಹಾಗೂ ಕಟ್ಟಡಗಳಿಗೆ ಬಿ ಖಾತಾ ನೀಡುವ ಐತಿಹಾಸಿಕ ನಿರ್ಧಾರವನ್ನು ಸಿದ್ದರಾಮಯ್ಯ ಸರ್ಕಾರ ಕೈಗೊಂಡಿದ್ದು, ರಾಜ್ಯ ಸರ್ಕಾರ ಮತ್ತೆ ಬಡವರ ಪರವಾಗಿದೆ ಎಂಬುದನ್ನು ಸಾಬೀತು ಮಾಡಿದೆ. ಇದರಿಂದ ರಾಜ್ಯದ 33 ಲಕ್ಷ ಕುಟುಂಬಗಳ ಜತೆ ಬೆಳ್ತಂಗಡಿ ನಗರ ವಾಸಿಗಳ ಹಲವು ವರ್ಷಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನಸಂಖ್ಯೆ ಹೆಚ್ಚಾಗುತ್ತಾ ಹೋದ ಹಾಗೆ ಮನೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಹೆ್ಚ್ಚಾದುದರಿಂದ ಬಡವಾಣೆ ರಚನೆ ಮಾಡಿ ಕಾನೂನು ತೊಡಕಿನಲ್ಲಿದ್ದವರಿಗೆ ಸರ್ಕಾರ ಬಿ ಖಾತಾ ನೀಡುವ ಮೂಲಕ ನೆರವಾಗಿದೆ. ಬಿ ರಿಜಿಸ್ಟರ್ ನಲ್ಲಿ ದಾಖಲಾಗುವ ಆಸ್ತಿಗಳಿಗೆ ಮೊದಲ ಬಾರಿಗೆ ಸ್ವತ್ತು ತೆರಿಗೆಯ ಮೇಲೆ 2 ರಷ್ಟು ತೆರಿಗೆಯನ್ನು ನಂತರ ವರ್ಷಗಳಲ್ಲಿ ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸಲಾಗುವುದು. 2024 ರ ಸೆ.10 ಕ್ಕಿಂತ ಮುಂಚೆ ರಿಜಿಸ್ಟರ್ ಆದ ಆಸ್ತಿಗಳನ್ನು ಮಾತ್ರ ಬಿ ಖಾತೆಯಲ್ಲಿ ನಮೂದಿಸಲು ಅವಕಾಶವಿದೆ. ಮೇ 10 2025 ರ ಒಳಗೆ ಸಂಬಂಧಿಸಿದ ಆಸ್ತಿಗಳಿಗೆ ಸ್ವತ್ತಿನ ಮಾಲಿಕತ್ವ, ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು /ದಾನ ಪತ್ರ /ವಿಭಾಗ ಪತ್ರ ಈ ಮುಂತಾದ ಅಗತ್ಯ ದಾಖಲೆ ನೀಡಿ ಪಟ್ಟಣ ಪಂಚಾಯಿತಿಗೆ ಲಿಖಿತ ಅರ್ಜಿಯನ್ನು ಕೊಡಬೇಕಾಗಿದೆ.
‘ಸರ್ಕಾರಿ ಜಾಗದಲ್ಲಿರುವ ಸೊತ್ತುಗಳಿಗೆ, ಸರ್ಕಾರದ ನಿಗಮ ಮಂಡಳಿಗಳ ಜಾಗಗಳು, ನಗರ ಸ್ಥಳೀಯ ಸಂಸ್ಥೆಗಳ ಜಾಗದಲ್ಲಿನ ಸೊತ್ತುಗಳಿಗೆ ಬಿ ಖಾತಾ ಅನ್ವಯವಾಗುವುದಿಲ್ಲ. . ಬಿ ಖಾತಾ ವಿಚಾರಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಡುವಾರು ಮಾಹಿತಿ ನೀಡುವಂತೆ ಸೂಚಿಸಲಾಗಿದ್ದು, ರಾಜ್ಯ ಮಟ್ಟದಲ್ಲಿ ಸ್ಥಾಪಿಸಲಾದ ಸಹಾಯವಾಣಿ 6366674001 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ’ ಎಂದರು

ಅಭಿವೃದ್ಧಿಗೂ ರಾಜ್ಯ ಸರಕಾರ ಅನುದಾನ ಒದಗಿಸಿದೆ.
ಗ್ಯಾರಂಟಿಗಳ ಮೂಲಕ ಬಡ ಜನರಿಗೆ ಸಹಾಯ ಮಾಡುತ್ತಿರುವ ಸರ್ಕಾರದ ಮೇಲೆ ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಕೊಡುತ್ತಿಲ್ಲ ಎಂಬ ಆರೋಪವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಆದರೆ ಬೆಳ್ತಂಗಡಿ ತಾಲ್ಲೂಕಿನ ಅಲ್ಪಸಂಖ್ಯಾತ ಕಾಲೋನಿಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ರೂ. 3 ಕೋಟಿ, ಎಸ್.ಸಿ.ಎಸ್.ಟಿ. ಕಾಲೋನಿ ಅಭಿವೃದ್ದಿಗಾಗಿ ರೂ. 3 ಕೋಟಿ ಬಿಡುಗಡೆಯಾಗಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಾಲ್ಲೂಕಿಗೆ ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆ ಮೂಲಕ ಬಂದಾಗ ಕೆಟ್ಟು ಹೋದ ರಸ್ತೆಯ ಅಭಿವೃದ್ದಿಗಾಗಿ ಅನುದಾನ ಬಿಡುಗಡೆಯಾದರೂ ಕಾಮಗಾರಿ ಆರಂಭಗೊಳ್ಳದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಂತರ ಮರುದಿವಸವೇ ಗುರುವಾಯನಕೆರೆ – ಪಿಲಿಗೂಡು ರಸ್ತೆ ಕಾಮಗಾರಿಗೆ ಶಿಲಾನ್ಯಾಸ ಮಾಡಲಾಗಿದೆ. ಪಿಲಿಗೂಡಿನಿಂದ ಕಲ್ಲೇರಿ ತನಕದ ರಸ್ತೆ ಅಭಿವೃದ್ದಿ ಅನುದಾನಕ್ಕಾಗಿ ಸಚಿವರಲ್ಲಿ ಮನವಿ ಮಾಡಲಾಗಿದೆ’ ಎಂದರು.
‘ರಾಷ್ಟ್ರೀಯ ಹೆದ್ದಾರಿ ಬೆಳ್ತಂಗಡಿ ಪೇಟೆಯಲ್ಲಿ ಹಾದು ಹೋಗುತ್ತಿರುವುದರಿಂದ ಬೆಳ್ತಂಗಡಿ ವರ್ತಕರ ಸಂಘದ ಬೇಡಿಕೆಯಂತೆ ಪೇಟೆಯನ್ನು ಹಾಗೆ ಉಳಿಸಿಕೊಂಡು ರಸ್ತೆ ಅಭಿವೃದ್ದಿ ಮಾಡುವಂತೆ ಸಚಿವ ಸತೀಶ್ ಜಾರಕಿಹೊಳಿಯವರಲ್ಲಿ ವಿನಂತಿಸಲಾಗಿದೆ. ಈ ಕುರಿತು ಫೆ.21ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು ಮುಂದಿನ ದಿನಗಳಲ್ಲಿ ಅದರ ಸ್ಪಷ್ಟ ರೂಪ ಸಿಗಲಿದೆ’ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶೇಖರ ಕುಕ್ಕೇಡಿ, ತಾಲ್ಲೂಕು ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ನಗರ ಪಂಚಾಯಿತಿ ಸದಸ್ಯರಾದ ಜಗದೀಶ್ ಡಿ, ಜನಾರ್ದನ್, ಪ್ರಮುಖರಾದ ಲಕ್ಷ್ಮಣ ಗೌಡ, ಹೆನ್ರಿ ಲೋಬೋ, ಅಬ್ದುಲ್ ಬಶೀರ್ ಇದ್ದರು.
