


ಬೆಳ್ತಂಗಡಿ:ಬೆಳ್ತಂಗಡಿ ವನ್ಯಜೀವಿ ವಲಯದ ಅರಣ್ಯದಲ್ಲಿ ಕಂಡುಬಂದಿದ್ದ ಬೆಂಕಿ ಹತೋಟಿಗೆ ಬಂದಿದೆ.
ಬೆಳ್ತಂಗಡಿ ವನ್ಯಜೀವಿ ವಲಯದ ಅಳದಂಗಡಿ ಶಾಖೆಯ ಶಿರ್ಲಾಲು ಮೇಲಿನ ನಾರಾವಿ ಮೀಸಲು ಅರಣ್ಯದ ಗುಡ್ಡದ ಹುಲ್ಲುಗಾವಲಿಗೆ ಕುದುರೆಮುಖ ಕಡೆಯಿಂದ ಬಂದ ಬೆಂಕಿಯು ಹರಡಿದ್ದು ಅರಣ್ಯ ಇಲಾಖೆಯ ಸಿಬ್ಬಂದಿಗಳು ರಾತ್ರಿ ಇಡೀ ಶ್ರಮವಹಿಸಿ ನಿಯಂತ್ರಣಕ್ಕೆ ತಂದಿದ್ದಾರೆ. ಬೆಳ್ತಂಗಡಿ ವನ್ಯಜೀವಿ ವಲಯದ ವಲಯ ಆರ್ ಎಫ್ ಒ ಶರ್ಮಿಷ್ಠಾ ಇವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ಗಸ್ತು ಅರಣ್ಯ ಪಾಲಕ ಹೇಮಂತ್ ಕುಮಾರ್, ಅರಣ್ಯ ವೀಕ್ಷಕ ಬಸವರಾಜ್, ಸಿಬ್ಬಂದಿಗಳಾದ ಸಂದೇಶ್, ಸಜಿತ್, ವಾಹನ ಚಾಲಕ ಹರೀಶ ಭಾಗವಹಿಸಿದ್ದರು.

ಕಾಡ್ಗಿಚ್ಚು ಹರಡದಂತೆ ಮುಂಜಾಗ್ರತ ಕ್ರಮವಾಗಿ ವಲಯ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಂಕಿರೇಖೆಗಳನ್ನು ನಿರ್ಮಾಣ ಮಾಡಲಾಗಿದೆ.ನಮ್ಮ ಸಿಬ್ಬಂದಿಗಳು ಸೋಮವಾರ ಮುಂಜಾನೆವರೆಗೂ ಕಾರ್ಯಾಚರಣೆ ನಡೆಸಿದ್ದು ಬೆಂಕಿಯನ್ನು ಹತೋಟಿಗೆ ತರುವಲ್ಲಿ ಸಫಲರಾಗಿದ್ದಾರೆ. ಹುಲ್ಲುಗಾವಲಿಗೆ ಬೆಂಕಿ ಹಿಡಿದ ಕಾರಣ ಹೆಚ್ಚಿನ ಯಾವುದೇ ಹಾನಿ ಸಂಭವಿಸಿಲ್ಲ. ಸಕಾಲದಲ್ಲಿ ಕಾರ್ಯಾಚರಣೆ ನಡೆಯದೆ ಹೋಗಿದ್ದರೆ ಹೆಚ್ಚಿನ ಹಾನಿ ಸಂಭವಿಸುವ ಸಾಧ್ಯತೆ ಇತ್ತು ಎಂದು ವನ್ಯಜೀವಿ ವಿಭಾಗದ ಆರ್ ಎಫ್ ಒ ಶರ್ಮಿಷ್ಠಾ ತಿಳಿಸಿದ್ದಾರೆ.