ಬೆಳ್ತಂಗಡಿ : ‘ಮನುಷ್ಯ ಬದುಕಿದರೆ ಕೆ. ವಸಂತ ಬಂಗೇರರ ಹಾಗೆ ಬದುಕಬೇಕು. ಬಡವರ ಪರ ಸದಾ ಕಾಳಜಿ ಬೆಳೆಸಿಕೊಂಡಿದ್ದ ಅವರು ತನ್ನ ಸಿದ್ಧಾಂತದಿಂದ ಹೊರಬಾರದ ಅಪರೂಪದ ವ್ಯಕ್ತಿಯಾಗಿದ್ದರು ‘ ಎಂದು ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಹೇಳಿದರು.
ಅವರು ಬುಧವಾರ ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬಿನುತಾ ಬಂಗೇರರವರ ಸಾರಥ್ಯದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇದರ ಸಹಕಾರದಲ್ಲಿ ಮಾಜಿ ಶಾಸಕರೂ, ಬೆಳ್ತಂಗಡಿ ಅಭಿವೃದ್ಧಿಯ ಹರಿಕಾರರೂ ಕೀರ್ತಿಶೇಷ ಕೆ.ವಸಂತ ಬಂಗೇರರವರ 79 ನೇ ಹುಟ್ಟು ಹಬ್ಬದ ಪ್ರಯುಕ್ತ ಮದ್ದಡ್ಕ ಬಂಡಿಮಠ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಆಶೀರ್ವಚನ ನೀಡಿದರು.

‘ಬಂಗೇರರಂತೆ ನಾವು ಜೀವನದಲ್ಲಿ ವಿಚಾರದಿಂದ ಹೊರ ಬರಬಾರದು. ಬಂಗೇರರಿಗೆ ಕಬಡ್ಡಿ ಇಷ್ಟದ ಆಟ. ಹಾಗಾಗಿ ಈ ಕಬಡ್ಡಿ ನಿರಂತರವಾಗಿ ನಡೆಯಬೇಕು. ಅವರ ಜೀವಿತ ಶೈಲಿಯನ್ನು ಸ್ಮರಣೆ ಮಾಡಲು ಇದು ಒಂದು ಅವಕಾಶ. ಬಂಗೇರರ ಶಕ್ತಿ ಶಾಶ್ವತವಾಗಿ ಉಳಿಯಲಿ’ ಎಂದು ಅವರು ಹೇಳಿದರು.
ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜೆ.ಆರ್.ಲೋಬೋ ಮಾತನಾಡಿ, ‘ ಕೆ. ವಸಂತ ಬಂಗೇರ ವ್ಯಕ್ತಿತ್ವ ಬಹಳ ಎತ್ತರವಾದ ವ್ಯಕ್ತಿತ್ವ. ಅವರ ಸಾವಿನ ಸಂದರ್ಭ ಬಂದ ಜನ ಸಮೂಹವೇ ಅದಕ್ಕೆ ಸಾಕ್ಷಿ. ಜನ ಸಾಮಾನ್ಯರ ಕೆಲಸ ಆಗಬೇಕಾದರೆ ಪಟ್ಟು ಬಿಡದೆ ಮಾಡುತ್ತಿದ್ದರು. ಅವರು ಯಾವ ಪಕ್ಷದಲ್ಲಿ ಇದ್ದರೂ ನಾಯಕರಾಗಿದ್ದರು. ಪಕ್ಷ ಮೀರಿ ಬೆಳೆದವರು ಅವರು’ ಎಂದರು.
ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಶಿವ ಪ್ರಸಾದ್ ಅಜಿಲ ಮಾತನಾಡಿ, ‘ ವಸಂತ ಬಂಗೇರರೊಂದಿಗಿನ 35 ವರ್ಷದ ಒಡನಾಟದ ಅನುಭವವನ್ನು ದೊಡ್ಡ ಗ್ರಂಥವಾಗಿ ಬರೆಯಬಹುದು. ಜನ ಸಾಮಾನ್ಯರ ಕೆಲಸ ಕಾರ್ಯಗಳಿಗಾಗಿ ಸದಾ ಬರುತ್ತಿದ್ದ ಬಂಗೇರರಿಗೆ ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ಮಂತ್ರಿಗಳ ಕಚೇರಿ ಬಾಗಿಲು ಮುಕ್ತವಾಗಿ ತೆರೆದಿತ್ತು ‘ ಎಂದರು.
ಬಂಗೇರ ಬ್ರಿಗೇಡ್ ಇದರ ಗೌರವಾಧ್ಯಕ್ಷೆ ಪ್ರಿತಿತ ಧರ್ಮ ವಿಜೇತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ರಾಘವೇಂದ್ರ ಭಟ್, ಹಿರಿಯ ಕಾಂಗ್ರೆಸ್ ಮುಖಂಡ ಉಮ್ಮರ್ ಕುಂಞಿ ಮುಸ್ಲಿಯಾರ್, ಕುವೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಶೆಟ್ಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು
ವೇದಿಕೆಯಲ್ಲಿ ಕೆ.ವಸಂತ ಬಂಗೇರರ ಪತ್ನಿ ಸುಜಿತಾ ವಿ ಬಂಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಸಿಪಿಐಎಂ ತಾಲ್ಲೂಕು ಸಮಿತಿ ಕಾರ್ಯದರ್ಶಿ ಬಿ.ಎಂ.ಭಟ್, ಆರ್ಯ ಈಡಿಗ ಮಹಾ ಸಂಸ್ಥಾನ ಸೊಲೂರು ಇದರ ಕಾರ್ಯದರ್ಶಿ ಧರ್ಮ ವಿಜೇತ್, ವಿ. ಪಿ.ಇನ್ವೆಸ್ಟ್ ಮೆಂಟ್ ಬೆಂಗಳೂರು ಇದರ ಸಂಜೀವ ಕಣೆಕಲ್, ಬಂಗೇರ ಬ್ರಿಗೇಡ್ ಇದರ ಅಧ್ಯಕ್ಷೆ ಬಿನುತ ಬಂಗೇರ, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಕಿರಾತ ಮೂರ್ತಿ ಧರ್ಮೂತ್ಹಾನ ಟ್ರಸ್ಟ್ ಬೆಳ್ತಂಗಡಿ ಇದರ ಅಧ್ಯಕ್ಷ ವೃಷಭ ಆರಿಗ, ಕುವೆಟ್ಟು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪಿ.ಕೆ.ಅಲಿಯಬ್ಬ, ಅಲ್ ಹುದಾ ಜುಮ್ಮಾ ಮಸೀದಿ ಸುನ್ನಾತ್ ಕೆರೆ ಇದರ ಅಧ್ಯಕ್ಷ ಅಬ್ದುಲ್ ಹಕೀಮ್, ಅಳದಂಗಡಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ಕುದ್ಯಾಡಿ, ದೈಹಿಕ ಶಿಕ್ಷಣ ಶಿಕ್ಷಕರ ಪರಿವೀಕ್ಷಣಾಧಿಕಾರಿ ಸುಜಯ ಇದ್ದರು.

ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಕೆ. ಗಂಗಾಧರ ಗೌಡ ಕಬಡ್ಡಿ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ರಾಕೇಶ್ ಮಲ್ಲಿ, ತಾಲೂಕು ಅಧ್ಯಕ್ಷ ರಂಜನ್ ಜಿ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಕೋಶಾಧಿಕಾರಿ ರಾಜಶ್ರೀ ವಿ ರಮಣ್ ಸ್ವಾಗತಿಸಿದರು.ಜತೆ ಕಾರ್ಯದರ್ಶಿ ರಾಕೇಶ್ ಮೂಡುಕೋಡಿ ವಂದಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.