ಮಂಗಳೂರು; ತನ್ನ ಮೂವರು ಮಕ್ಕಳನ್ನು ಬಾವಿಗೆ ದೂಡಿ ಕೊಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಮರಣದಂಡನೆ ವಿಧಿಸಿ ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಆರೋಪಿ ಹಿತೇಶ್ ಶೆಟ್ಟಿಗಾರ್ (36) ಗಲ್ಲು ಶಿಕ್ಷೆಗೆ ಗುರಿಯಾದ ಆರೋಪಿ.
ಮುಲ್ಕಿ ಠಾಣೆ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಪದ್ಮನೂರು ಎಂಬಲ್ಲಿ ಜೂನ್ 23, 2022 ರಂದು ಹಿತೇಶ್ ಶೆಟ್ಟಿಗಾರ್ ಕುಡಿದು ಬಂದು ಆಗ ತಾನೇ ಶಾಲೆಯಿಂದ ಮನೆಗೆ ಬಂದಿದ್ದ ಮಕ್ಕಳಾದ ರಶ್ಮಿತಾ (13), ಉದಯ ಕುಮಾರ್ (11), ದಕ್ಷಿತ್ (5) ಮಕ್ಕಳನ್ನು ಬಾವಿಗೆ ದೂಡಿ ಹಾಕಿದ್ದು, ದೊಡ್ಡ ಮಗಳು ರಶ್ಮಿತಾ ಬಾವಿಗೆ ಅಳವಡಿಸಿದ್ದ ಪಂಪನ್ನು ಹಿಡಿದು ನೇತಾಡುತ್ತಿದ್ದಾಗ, ಆ ಪೈಪನ್ನೇ ಕತ್ತಿಯಿಂದ ಕಡಿದಿದ್ದಾನೆ. ಕೂಡಲೇ ಆಕೆ ಕೂಡಾ ನೀರಿಗೆ ಬಿದ್ದು ಸಾವಿಗೀಡಾಗಿದ್ದಳು.
ನಂತರ ಹೋಟೆಲ್ ಕೆಲಸ ಮುಗಿಸಿ ಬಂದ ಪತ್ನಿ ಲಕ್ಷ್ಮೀಯನ್ನು ಕೂಡಾ ಹಿತೇಶ್ ಬಾವಿಗೆ ದೂಡಲು ಪ್ರಯತ್ನ ಮಾಡಿದ್ದು, ಆಕೆ ಬೊಬ್ಬೆ ಹೊಡೆದಿದ್ದಾಳೆ. ಕೂಡಲೇ ಆಕೆಯ ಬೊಬ್ಬೆ ಕೇಳಿದ ಸ್ಥಳೀಯರು ಬಾವಿಯಿಂದ ರಕ್ಷಣೆ ಮಾಡಿದ್ದಾರೆ. ಈ ಕುರಿತು ಪತ್ನಿ ಲಕ್ಷ್ಮೀ ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿದ್ದರು.
ಈ ಕೊಲೆ ಕುರಿತು ಮುಲ್ಕಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕುಸುಮಾಧರ್ ಅವರು ದೋಷಾರೋಪ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಕೆ ಮಾಡಿದ್ದರು. ವಕೀಲಾದ ಮೋಹನ್ ಕುಮಾರ್ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು. ಡಿ.31ರಂದು ಶಿಕ್ಷೆ ಘೋಷಣೆ ಮಾಡಿದ್ದು ಆರೋಪಿಯ ಕೃತ್ಯಕ್ಕೆ ಗಲ್ಲು ಶಿಕ್ಷೆ ನೀಡಿ ಆದೇಶ ನೀಡಿದ್ದಾರೆ.
