Home ಅಪಘಾತ ವಯನಾಡ್ ಜಲಸ್ಪೋಟ ಸಾವಿನ ಸಂಖ್ಯೆ 151ಕ್ಕೆ ಏರಿಕೆ 200 ಕ್ಕೂ ಅಧಿಕ ಜನರು ನಾಪತ್ತೆ

ವಯನಾಡ್ ಜಲಸ್ಪೋಟ ಸಾವಿನ ಸಂಖ್ಯೆ 151ಕ್ಕೆ ಏರಿಕೆ 200 ಕ್ಕೂ ಅಧಿಕ ಜನರು ನಾಪತ್ತೆ

344
0

ವಯನಾಡ್ : ಭಾರೀ ಮಳೆಯಾಗುತ್ತಿರುವ ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಭೂಕುಸಿತಗಳಲ್ಲಿ ಕನಿಷ್ಠ 151 ಜೀವಗಳನ್ನು ಬಲಿ ಪಡೆದಿದೆ. ಸರಕಾರ ಅಧಿಕೃತವಾಗಿ 151ಮಂದಿ‌ನ ಮೃತಪಟ್ಟಿರುವುದಾಗಿ ಪ್ರಕಟಿಸಿದೆ. ಇನ್ನೂ 98ಮಂದಿ ನಾಪತ್ತೆಯಾಗಿರುವುದಾಗಿ ಸರಕಾರಿ ಅಧಿಕಾರಿಗಳು ಮಾಹಿತಿ ನೀಡಿದೆ. ಆದರೆ 200ಕ್ಕೂ ಅಧಿಕ ಮಂದಿ ನಾಪತ್ತೆಯಾಗಿರುವುದಾಗಿ ಸ್ಥಳೀಯರ ಮಾಹಿತಿಯಂತೆ ಕೇರಳದ‌ ಮಾದ್ಯಮಗಳು ವರದಿ ಮಾಡಿದೆ.

ಹಲವಾರು ಕುಟುಂಬಗಳು ನಾಪತ್ತೆಯಾಗಿದೆ, ಕಲ್ಲುಮಣ್ಣಿನ ಅವಶೇಷಗಳಡಿ ಸಿಲುಕಿಕೊಂಡಿರುವ ನೂರಾರು ಜನರ ರಕ್ಷಣೆಗಾಗಿ ಸಮರೋಪಾದಿಯಲ್ಲಿ ಕಾರ್ಯಾಚರಣೆಗಳು ನಡೆಯುತ್ತಿವೆ. 130ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.


ಮುಂಜಾನೆಯ ವೇಳೆ ಸಂಭವಿಸಿದ ಭೂಕುಸಿತಗಳಲ್ಲಿ ಮೂರು ಗ್ರಾಮಗಳ ಮನೆಗಳು ಕೊಚ್ಚಿಕೊಂಡು ಹೋಗಿವೆ ಎನ್ನಲಾಗಿದೆ. ಹಲವಾರು ಮನೆಗಳು ಧ್ವಂಸಗೊಂಡಿವೆ. ಜಲಮೂಲಗಳು ತುಂಬಿ ಹರಿಯುತ್ತಿವೆ, ಮರಗಳು ಬುಡಸಹಿತ ಉರುಳಿ ಬಿದ್ದಿವೆ. ಬೃಹತ್ ಬಂಡೆಗಳು ಉರುಳಿಬಿದ್ದಿವೆ ಇದು ರಕ್ಷಣಾ ಕಾರ್ಯಾಚರಣೆಗಳಿಗೆ ತೀವ್ರ ಅಡ್ಡಿಯಂಟಾಗಿದೆ.

ಮೆಪ್ಪಾಡಿಯಲ್ಲಿ ಸಂಭವಿಸಿದ ಭೂಕುಸಿತ ಇಡೀ ಗ್ರಾಮವನ್ನೇ ಸರ್ವನಾಶ ಮಾಡಿದೆ. ಮುಂಡಕ್ಕೈ, ಚೂರ್ಲಮಾಲ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಸಂಪರ್ಕವನ್ನು ಕಳೆದುಕೊಂಡಿವೆ. ಮುಂಡಕ್ಕೈ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ.
ನದಿಗಳು ತೊರೆಗಳು ಉಕ್ಕಿ ಹರಿಯುತ್ತಿದ್ದು ಭೂಕುಸಿತದಿಂದಾಗಿ ಅವುಗಳು ಮಾರ್ಗವನ್ನು ಬದಲಿಸಿ ಜನವಸತಿ ಪ್ರದೇಶದ ಮೂಲಕ ಹರಿದಿದ್ದು ಹೆಚ್ಚಿನ ವಿನಾಶವನ್ನುಂಟು ಮಾಡಿದೆ.
ಮಲಯಾಳಂ ಮಾಧ್ಯಮ ವರದಿಗಳ ಪ್ರಕಾರ ಹಲವಾರು ಕಿ.ಮೀ ದೂರದ ಮಲಪ್ಪುರಮ್‌ ನಲ್ಲಿ ಚಾಲಿಯಾರ್ ನದಿಯಲ್ಲಿ ತೇಲುತ್ತಿದ್ದ ರೀತಿಯಲ್ಲಿ 17 ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ಮೃತರ ಶವಗಳ ಗುರುತು ಪತ್ತೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಇದುವರೆಗೆ 151 ಸಾವುಗಳು ದೃಢಪಟ್ಟಿದ್ದು, ಇನ್ನೂ ಹಲವರು ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದಾರೆ. ಸಾವುಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕವಿದೆ ಎಂದು ಸ್ಥಳೀಯ ಮಾದ್ಯಮಗಳು ವರದಿ ಮಾಡುತ್ತಿದೆ.

ಕೆಸರು ಮಿಶ್ರಿತ ನೀರಿನ ಪ್ರವಾಹದ ನಡುವೆ ತಮ್ಮ ಮನೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವವರು ಹಾಗೂ ಸೇತುವೆಗಳು ಕೊಚ್ಚಿಕೊಂಡು ಹೋಗಿದ್ದರಿಂದ ಮತ್ತು ರಸ್ತೆಗಳಲ್ಲಿ ನೆರೆ ನೀರು ತುಂಬಿರುವುದರಿಂದ ಸ್ಥಳದಿಂದ ತೆರಳಲು ಸಾಧ್ಯವಾಗದ ಹಲವಾರು ಜನರು ಅಳುತ್ತಿರುವ ಮತ್ತು ರಕ್ಷಣೆಗಾಗಿ ಅಂಗಲಾಚುತ್ತಿರುವ ಹೃದಯ ಕಲಕುವ ದೂರವಾಣಿ ಸಂಭಾಷಣೆಗಳನ್ನು ಸ್ಥಳೀಯ ದೃಶ್ಯ ಮಾದ್ಯಗಳು ಪ್ರಸಾರ ಮಾಡಿವೆ.

ಬುಧವಾರ ಬೆಳಗ್ಗಿನಿಂದ ಮಳೆಯ ಅಬ್ಬರ ಒಂದಿಷ್ಟು ಕಡಿಮೆಯಾಗಿದ್ದು ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ವೇಗ ಪಡೆದುಕೊಂಡಿದೆ. ಕಾರ್ಯಾಚರಣೆಗಳಲ್ಲಿ ನೆರವಾಗಲು ಎನ್‌ಡಿಆರ್‌ಎಫ್ ತಂಡಗಳು ಮತ್ತು ಸೇನಾ ತುಕಡಿಗಳು ಧಾವಿಸಿವೆ, ಜೊತೆಗೆ ಹೆಲಿಕಾಪ್ಟರ್‌ಗಳೂ ಆಗಮಿಸಿವೆ ಎಂದು
ವರದಿಗಳ ಪ್ರಕಾರ ಚೂರ್ಲಮಾಲ ಪ್ರದೇಶವನ್ನು ಸಂಪರ್ಕಿಸುವ ಸೇತುವೆಗೆ ಹಾನಿಯಾಗಿದ್ದು, ಸಂಪೂರ್ಣವಾಗಿ ನಾಮಾವಶೇಷಗೊಂಡಿರುವ ಮುಂಡಕ್ಕೈ ತಲುಪಲು ರಕ್ಷಣಾ ತಂಡಗಳು ಹರಸಾಹಸ ಪಡಬೇಕಾಗಿ ಬಂತು. ತಾತ್ಕಾಲಿಕ ಸೇತುವೆ ನಿರ್ಮಿಸಿ ಈ ಪ್ರದೇಶಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಇಲ್ಲಿ ಇದೀಗ ಇನ್ನಷ್ಟು ಮೃತದೇಹಗಳು ಪತ್ತೆಯಾಗುತ್ತಿದೆ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತಿದೆ. ಸುಮಾರು 300ಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ನಾಮಾವಶೇಷವಾಗಿದೆ. ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದ್ದ ಈ ಊರು ಇದೀಗ ಸರ್ವನಾಶವಾಗಿದೆ.

ಎನ್‌ಡಿಆರ್‌ಎಫ್ ಜೊತೆಗೆ ಪೋಲಿಸ್ ಮತ್ತು ಅಗ್ನಿಶಾಮಕ ಪಡೆಯ ವಿಪತ್ತು ಪ್ರತಿಕ್ರಿಯಾ ತಂಡಗಳೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಸ್ವಯಂಸೇವಕರು ಮತ್ತು ಸ್ಥಳೀಯ ನಿವಾಸಿಗಳೂ ಕಾರ್ಯಾಚರಣೆಯಲ್ಲಿ ಸಹಕರಿಸುತ್ತಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸರಕಾರದ ಎಲ್ಲ ಇಲಾಖೆಗಳು ಕೈಜೋಡಿಸಿವೆ. ನೂರಾರು ಜನರು ಸಿಕ್ಕಿಹಾಕಿಕೊಂಡಿರುವ ಭೀತಿಯಿದ್ದು, ಸಮನ್ವಯದೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಐವರು ಸಚಿವರು ಸ್ಥಳದಲ್ಲಿದ್ದು ಮೇಲ್ವಿಚಾರಣೆ ವಹಿಸಿದ್ದಾರೆ. ಹಿರಿಯ ಪೋಲಿಸ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಕೇರಳ ಸಶಸ್ತ್ರ ಪೋಲಿಸ್ ಪಡೆಯ ಎರಡು ಬೆಟಾಲಿಯನ್‌ಗಳು ಮತ್ತು ಮಲಬಾರ್ ಸ್ಪೆಷಲ್ ಪೋಲಿಸ್ ಪಡೆಯನ್ನು ಸ್ಥಳಕ್ಕೆ ರವಾನಿಸಲಾಗಿದೆ. ಆರೋಗ್ಯ ಇಲಾಖೆಯ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಎರಡು ದಿನ ಶೋಕಾಚರಣೆ:

ಭೀಕರ ದುರಂತದ ಹಿನ್ನಲೆಯಲ್ಲಿ ಕೇರಳ ಸರಕಾರವು ಮಂಗಳವಾರ ಮತ್ತು ಬುಧವಾರ ಅಧಿಕೃತ ಶೋಕಾಚರಣೆಯನ್ನು ಪ್ರಕಟಿಸಿದೆ. ಈ ಅವಧಿಯಲ್ಲಿ ಯಾವುದೇ ಅಧಿಕೃತ ಸಮಾರಂಭಗಳು ಮತ್ತು ಕಾರ್ಯಕ್ರಮಗಳು ನಡೆಯುವುದಿಲ್ಲ.

LEAVE A REPLY

Please enter your comment!
Please enter your name here