ಬೆಳ್ತಂಗಡಿ; ಅಕ್ಷರ ದಾಸೋಹ ನೌಕರರನ್ನು ಅತೀ ಕಡಿಮೆ ಸಂಬಳದಲ್ಲಿ ಜೀತದಾಳುಗಳನ್ನಾಗಿ ಬೆಳಗ್ಗೆ 9 ಗಂಟೆಯಿಂದ ಸಂಜೆ 3 ಗಂಟೆ ತನಕ ದುಡಿಸಿ ನಿವೃತ್ತಿಯಾಗುವಾಗ ಬರೀ ಕೈಯಲ್ಲಿ ಮನೆಗೆ ಕಳುಹಿಸುವುದು ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಚಿಕೆಯ ವಿಚಾರವಾಗಿದೆ ಎಂದು ಸಿಐಟಿಯು ಮುಖಂಡರಾದ ಬಿ.ಎಂ.ಭಟ್ಟ್ ಹೇಳಿದರು.
ಅವರು ಬೆಳ್ತಂಗಡಿಯಲ್ಲಿ ಮಂಗಳವಾರ ಬೆಂಗಳೂರು ಪ್ರೀಡಂ ಪಾರ್ಕಲ್ಲಿ ಜುಲೈ 15 ರಿಂದ ಅನಿರ್ದಿಷ್ಟ ಕಾಲ ನಡೆಯುತ್ತಿರುವ, ಅಕ್ಷರ ದಾಸೋಹ ನೌಕರರ ಹೋರಾಟಕ್ಕೆ ಬೆಂಬಲಸೂಚಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಇಂದು ಕೇಂದ್ರ ಹಾಗೂ ರಾಜ್ಯ ಸರಕಾರದ ಸಮಪಾಲಿನ ಯೋಜನೆಯಾದ ಅಕ್ಷರದಾಸೋಹ ಯೋಜನೆಯಲ್ಲಿ ಅಡುಗೆಯವರಾದ ತಾಯಂದಿರನ್ನು ಜುಜುಬಿ 3,600 ರೂ ಮಾಸಿಕ ಸಂಬಳಕ್ಕೆ ದುಡಿಸುವ ಸರಕಾರದ ನೀತಿ ಜೀತದಾಳನ್ನು ಸೃಷ್ಟಿಸುವುದಾಗಿದೆ. ಬಿಸಿಯೂಟ ನೌಕರರ ಬದುಕಲು ಸಂಬಳ ಕೊಡಿ ಎಂದು ಕೂಗಿ ಕೂಗಿ ಹೇಳಿದರೂ ಕಿವಿ ಕೊಡದ ಸರಕಾರಗಳು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ದ್ರೋಹವಾಗಿದೆ. ಕೇಂದ್ರ ಸರಕಾರ ಕಳೆದ 10 ವರ್ಷಗಳಿಂದ ವೇತನ ಏರಿಸದೆ ದ್ರೋಹ ಎಸಗಿದೆ ಎಂದರು. ಬಿಸಿಯೂಟ ನೌಕರರಿಗೆ ಮಾಸಿಕ ರೂ 10,000 ರೂ ಸಂಬಳ ಹಾಗೂ 60 ವರ್ಷ ಆಗಿ ನಿವೃತ್ತಿಯಾಗುವಾಗ ಕನಿಷ್ಟ ಇಡುಗಂಟು ನೀಡುವುದು ಅಗತ್ಯವಾಗಿದೆ. ಜೊತೆಗೆ ವರ್ಷದ 12 ತಿಂಗಳು ಕೂಡಾ ಸಂಬಳ ನೀಡಬೇಕಿದೆ ಮತ್ತು ಮಕ್ಕಳ ಹಾಜರಾತಿ ಏರುಪೇರಾದರಾಗ ನೌಕರರನ್ನು ಕೆಲಸದಿಂದ ತೆಗೆಯುವ ದುಷ್ಟ ಪದ್ದತಿ ಕೈಬಿಡಬೇಕು ಹಾಗೂ ಪ್ರತಿ ಶಾಲೆಯಲ್ಲೂ ಕನಿಷ್ಟ 2 ಜನ ಅಡುಗೆಯವರು ಕಡ್ಡಾಯ ಇರುವಂತೆ ಮಾಡಬೇಕಿದೆ ಎಂದರು.
ಸಂಘದ ಉಪಾದ್ಯಕ್ಷೆ ಜಾನಕಿ ಸ್ವಾಗತಿಸಿದರು. ಡಿ.ವೈ.ಎಫ್.ಐ. ನಾಯಕ ಅಬಿಷೇಕ್ ವಂದಿಸಿದರು. ಸಂಘದ ಅದ್ಯಕ್ಷರಾದ ಜೋನ್ಸಿ, ಕಾರ್ಯದರ್ಶಿ ಗೀತಾ ಕಾಯರ್ತಡ್ಕ, ಖಜಾಂಜಿ ಮೀನಾಕ್ಷಿ ಹಾಗೂ ಕಾರ್ಮಿಕ ಮುಖಂಡರುಗಳಾದ ಜಯರಾಮ ಮಯ್ಯ, ರಾಮಚಂದ್ರ, ಅಶ್ವಿತ ಮೊದಲಾದವರು ಇದ್ದರು. ಕೊನೆಗೆ ತಾಲೂಕು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ನೀಡಲಾಯಿತು.
