ಬೆಳ್ತಂಗಡಿ; ನಾವೂರು ಗ್ರಾಮದ ಕೈಕಂಬ- ಅತ್ಯಡ್ಕ- ಬಳ್ಳಿತೋಟ- ಬೋಜಾರ- ಮೂಡಾಯಿಬೆಟ್ಟು ಸಂಪರ್ಕಿಸುವ ರಸ್ತೆಯಲ್ಲಿರುವ ಕೈಕಂಬ ಸೇತುವೆ ಹಲವಾರು ವರ್ಷಗಳಿಂದ ಶಿಥಿಲಗೊಂಡಿದ್ದು ನಾವೂರು ಗ್ರಾಮ ಪಂಚಾಯತ್ ಇದೀಗ ಈ ಸೇತುವೆಯಲ್ಲಿ ಘನ ವಾಹನ ಸಂಚಾರವನ್ನು ನಿಷೇಧಿಸಿ ಬೋರ್ಡ್ ಅವಳವಡಿಸಿದೆ.
ಈ ಸೇತುವೆಯ ಎರಡೂ ಕಡೆಯ ತಡೆಗೋಡೆಗಳು 2019 ರ ಭೀಕರ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕೊಚ್ಚಿ ಹೋಗಿತ್ತು. ಸೇತುವೆಯ ಅಡಿ ಭಾಗದಲ್ಲಿ ಕಾಂಕ್ರೀಟ್ ಕಿತ್ತು ಹೋಗಿ ಕಬ್ಬಿಣದ ಸರಳು ಕಾಣುತ್ತಿದೆ. ಇಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಹಲವಾರು ಬಾರಿ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಕೊನೆಗೆ ಕಳೆದ ಚುನಾವಣೆಯ ಸಂದರ್ಭದಲ್ಲಿ ಈ ಪ್ರದೇಶದ ನಾಗರಿಕರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದರು. ಆಗ ಆ ಪ್ರದೇಶಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ , ನಾವೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲನೆ ನಡೆಸಿದ್ದರು.
ಚುನಾವಣೆ ಮುಗಿದ ಬಳಿಕ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ಆದರೆ ಇದೀಗ ಚುನಾವಣೆ ಮುಗಿದರೂ ಸೇತುವೆಯನ್ನು ದುರಸ್ತಿಪಡಿಸುವ ಕಾರ್ಯಕ್ಕೆ ಯಾರೂ ಮುಂದಾಗಿಲ್ಲ.
ಇದೀಗ ಸೇತುವೆ ಶಿಥಿಲವಾಗಿದ್ದು ಘನ ವಾಹನ ಸಂಚಾರವನ್ನು ನಿಷೇಧಿಸಿದೆ ಎದು ಗ್ತಾಮ ಪಂಚಾಯತಿನಿಂದ ಬೋರ್ಡ್ ಹಾಕಲಾಗಿದೆ. ಸೇತುವೆ ದುರ್ಬಲಗೊಂಡಿದ್ದು ಶಾಲಾ ಮಕ್ಕಳು , ಸಾರ್ವಜನಿಕರು ಸಂಚರಿಸುವಾಗ ಎಚ್ಚರಿಕೆ ಅಗತ್ಯವಿದೆ ಎಂದು ಎಚ್ಚರಿಕೆ ನೀಡಿದೆ. ಸೇತುವೆಯ ಮೂಲಕ ಪ್ರತಿನಿತ್ಯ ಪ್ರಯಾಣಿಸುವರು ಆತಂಕದಲ್ಲಿಯೇ ಸೇತುವೆಯನ್ನು ದಾಟಬೇಕಾದ ಅನಿವಾರ್ಯತೆಯಿದೆ
