ಬೆಳ್ತಂಗಡಿ; ಸಮಾಜವನ್ನೇ ತನ್ನ ಕುಟುಂಬವಾಗಿ ಕಂಡಿದ್ದ ಅಪರೂಪದ ವ್ಯಕ್ತಿತ್ವ ನಮ್ಮ ತಂದೆ ವಸಂತ ಬಂಗೇರ ಅವರದ್ದಾಗಿತ್ತು ಎಂದು ಸನ್ಮಾನ್ಯ ಕೆ ವಸಂತ ಬಂಗೇರ ಅವರ ಮಗಳು ಪ್ರಿತಿತಾ ಬಂಗೇರ ಹೇಳಿದರು. ಪಟ್ರಮೆಯ ಅನಾರು ಶಾಲಾ ಜನಾರ್ಪಣ ಭವನದಲ್ಲಿ ಸನ್ಮಾನ್ಯ ಕೆ. ವಸಂತ ಬಂಗೇರ ಅವರಿಗೆ ಗೌರವಯುತ ಶ್ರದ್ದಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತಾಡುತ್ತಿದ್ದರು. ಮಂಗನಕಾಯಿಲೆಯ ಹುಟ್ಟಡಗಿಸಿದ ಅವರ ಸಾಧನೆ ಕೇಳಿ ಬಲ್ಲೆ. ಅವರನ್ನು ಗೌರವಿಸುವ ಜನರನ್ನು ಕಂಡು ನಮ್ಮ ಅಪ್ಪನ ಬಗ್ಗೆ ಹೆಮ್ಮೆಯೂ, ಇಷ್ಟ ಬೇಗ ಅವರಿಂದ ನಾವೆಲ್ಲ ಅಗಲುವಂತಾದ್ದು ತುಂಬಾ ನೋವೂ ಆಗುತ್ತಿದೆ ಎಂದರು. ಆಸ್ಪತ್ರೆಯಲ್ಲಿ ದಿನಾ ತಾನು ಜನರ ಬಳಿಗೆ ಹೋಗಬೇಕು ಎನ್ನುತ್ತಿದ್ದ ಅವರನ್ನು ಮತ್ತೆ ಜನರ ಬಳಿಗೆ ಬರುವಂತೆ ಮಾಡುವಲ್ಲಿ ಸಾದ್ಯಾಗದಿರುವುದು ವಿಷಾಧನೀಯ ಎಂದರು.
ಅದ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಬಿ.ಎಂ.ಭಟ್ ಅವರು 1983 ರಿಂದ 2024 ರ ತನಕದ ಅವರ ಒಡನಾಟದ ಮರೆಯಲಾಗದ ಕ್ಷಣಗಳನ್ನು ವಿವರಿಸಿದರು. ಯಾವ ಭಾಗ್ಯ ದೊರೆತರೇನು ಬೆಳ್ತಂಗಡಿಗಿದ್ದ ಅತ್ಯಂತ ಮುಖ್ಯವಾದ ಬಂಗೇರ ಎಂಬ ಭಾಗ್ಯವೇ ಇಲ್ಲದಾಗಿದೆ ಎಂಬುದೇ ದುಃಖಕರ ಎಂದರು. ಬಂಗೇರರು ಇದ್ದ ಬೆಳ್ತಂಗಡಿಯಲ್ಲಿ ಬದುಕಿ ಬಂದ ನಮಗೆ ಬಂಗೇರರು ಇಲ್ಲದ ಬೆಳ್ತಂಗಡಿ ಹೇಗಿರುತ್ತೆ ಎಂಬುದು ಇನ್ನು ಕಲಿಯಬೇಕಿದೆ ಮತ್ತು ಅದು ಬೆಳ್ತಂಗಡಿಗೆ ಅನಿವಾರ್ಯವೂ ಆಗಿದೆ ಎಂದರು. ಅವರು ಅದಿಕಾರಿಗಳಿಗೆ ಬೈಯುತ್ತಿದ್ದರೂ ಮತ್ತೆ ಹೇಳುತ್ತಿದ್ದರಂತೆ ಯಾಕೆ ನನ್ನ ಕೈಯಿಂದ ಬೈಗುಳ ತೀಂತೀರಿ? ಅದು ಬೈಗುಳ ಅಲ್ಲ ನೋವಿನ ವಿಶಾದಗಳು, ನಿಷ್ಟೆಯಿಂದ ಕೆಲಸ ಮಾಡಿ, ಜನರಿಗಾಗಿ ದುಡಿಯಿರಿ ಅಷ್ಟೇ ಸಾಕು ಎನ್ನುತ್ತಿದ್ದರಂತೆ. ಅತೀ ಕುಗ್ರಾಮವಾಗಿದ್ದ ಅಂಡಮಾನಿನಂತಿದ್ದ ಪಟ್ರಮೆಯನ್ನು ಸುಗ್ರಾಮವನ್ನಾಗಿ ಬದಲಾಯಿಸಿದ ಅವರ ಭಗೀರಥ ಪ್ರಯತ್ನವನ್ನು ಎಂದೂ ಮರೆಯಲಾಗದು. ಜನರು ಹೋರಾಟ ನಡೆಸುವುದನ್ನು ಯಾವತ್ತೂ ತಿರಸ್ಕಾರದಿಂದ ಕಾಣದ ಅವರು ಹೋರಾಟಕ್ಕೂ ಒಂದು ಉದ್ದೇಶ ಮೌಲ್ಯ ಇದೆ ಎನ್ನುತ್ತಾ ಪಟ್ರಮೆ ಗ್ರಾಮಸ್ಥರ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ ಕೀರ್ತಿ ಶ್ರೀ ಕೆ.ವಸಂತ ಬಂಗೇರ ಅವರದ್ದಾಗಿದೆ. 1985 ರಲ್ಲಿ ವಿದ್ಯುತ್ ಸಂಪರ್ಕ, 1987 ರಲ್ಲಿ ಅಡ್ಯೆ ಸೇತುವೆ, 1989-90 ರಲ್ಲಿ ಗ್ರಾಮಕ್ಕೆ ಬಸ್, 1998-99 ರಲ್ಲಿ ಗ್ರಾಮಕ್ಕೆ ಎರಡು ಸೇತುವೆಗಳು, ಕೊಕ್ಕಡ-ಧರ್ಮಸ್ಥಳ ರಸ್ತೆಗೆ ಡಾಮರೀಕರಣ, ಗ್ರಾಮಕ್ಕೆ ಹೆಚ್ಚುವರಿಯಾಗಿ 3 ಶಾಲೆಗಳನ್ನು ನೀಡಿ ಮೇಲೆತ್ತಿದವರು ಶ್ರೀಯುತ ವಸಂತ ಬಂಗೇರರಾಗಿದ್ದಾರೆ ಎಂದರು. ಮಂಗನ ಕಾಯಿಲೆಯಂತಹ ಅತಿ ದೊಡ್ಡ ರೋಗ ಬಂದಿದ್ದಾಗಲೂ, 70 ಜನರ ಜೀವ ಹೋಗಿದ್ದಂತಹ ಕಾಯಿಲೆಯಾಗಿದ್ದರೂ ಲಾಕ್‌ಡೌನ್ ಇಲ್ಲದೆ, ಅವರೂ ಮನೆಯಲ್ಲಿ ಕೂರದೆ, ಅಂಜದೆ ಪಟ್ರಮೆಯ ಜನರ ಜೀವ ಉಳಿಸಿದ ಬಂಗೇರ ಅವರಿಗೆ ಅವರ ಆದರ್ಶವನ್ನು ಮೈಗೂಡಿಸಿ ನಡೆಯುವುದೇ ನಾವೆಲ್ಲ ಅವರಿಗೆ ನೀಡುವ ಶ್ರದ್ದಾಂಜಲಿಯಾಗಿದೆ ಎಂದರು.
ಈ ಸಂದರ್ಭ ಪ್ರಭಾರ ಸರಕಾರಿ ವಕೀಲರಾದ ಮನೋಹರ ಕುಮಾರ್ ಮಾತಾಡುತ್ತಾ ಹಿಡಿದ ಕೆಲಸವನ್ನು ಅದೆಷ್ಟು ಕಷ್ಟವಾಗಿದ್ದರೂ ಮಾಡದೆ ಬಿಡದ ಛಲವನ್ನು ನಾವು ಅವರಿಂದ ಕಲಿಯಬೇಕಿದೆ ಎಂದರು. ವಸಂತಬಂಗೇರ ಅಬಿಮಾನಿ ಸಂಘವನ್ನು ನಿರಂತರ ಜೀವಂತ ಇಡುತ್ತಾ ಇನ್ನಷ್ಟು ಸೇವೆಗಳು ಅವರ ಹೆಸರಲ್ಲಿ ಬೆಳ್ತಂಗಡಿ ಜನತೆಗೆ ಸಿಗುವಂತೆ ಮಾಡಲಾಗುವುದು ಎಂದರು. ಮಾನ್ಯ ವಸಂತ ಬಂಗೇರ ಅವರ ಹೆಸರು ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ಇಡುವುದು ಅವರ ಮೂರ್ತಿ ತಾಲೂಕು ಕೇಂದ್ರದಲ್ಲಿ ಸ್ಥಾಪಿಸುವುದೂ ಸೇರಿದಂತೆ ಅವರ ನೆನಪು ಶಾಸ್ವತವಾಗಿ ಇಡುವ ಕೆಲಸಕ್ಕೆ ಸರಕಾರ ಒಪ್ಪಿದೆ ಎಂದರು. ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ತಾಲೂಕು ಅದ್ಯಕ್ಷರಾದ ಜಯವಿಕ್ರಮ ಮಾತಾಡಿದರು. ಕೊಕ್ಕಡ ಸೊಸ್ಯೆಟಿ ನಿರ್ದೇಶಕರಾದ ಜಾರಪ್ಪ ಗೌಡ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಅನಾರು ಶಾಲಾ ಎಸ್.ಡಿ.ಎಂಸಿ ಅದ್ಯಕ್ಷರಾದ ಧನಂಜಯ ಗೌಡ ಉಪಸ್ತಿತರಿದ್ದರು. ಮೊದಲಿಗೆ ಮಾಜಿ ಪಂಚಾಯತು ಸದಸ್ಯರಾದ ಶ್ಯಾಮರಾಜ್ ಪಟ್ರಮೆ ಅವರು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಪಂಚಾಯತು ಸದಸ್ಯೆ ಗಿರಿಜ, ಕೊಕ್ಕಡ ಸೊಸೈಟಿ ಮಾಜಿ ಅದ್ಯಕ್ಷರಾದ ವಿಶ್ವನಾಥ ಶೆಟ್ಟಿ, ನಿರ್ಧೇಶಕರಾದ ವಿಶ್ವನಾಥ ಕೊಲ್ಲಾಜೆ, ಸೊಸೈಟಿಯ ಮಾಜಿ ಉಪಾದ್ಯಕ್ಷರಾದ ಹನಿಯ ಪಾದೆಜಾಲು, ದಲಿತ ಹಕ್ಕು ಸಮಿತಿ ತಾಲೂಕು ಅದ್ಯಕ್ಷರಾದ ಪೊಡಿಯ, ಮಹಿಳಾ ಸಂಘದ ಕಿರಣಪ್ರಭಾ, ರೈತಮುಖಂಡರುಗಳಾದ ಲಕ್ಷ್ಮಣ ಗೌಡ, ವಸಂತ ಟೈಲರ್, ವಿದ್ಯಾರ್ಥಿ ನಾಯಕ ವಿನುಶರಮಣ, ಉಸ್ಮಾನ್ ಅನಾರು, ಚಂದ್ರಶೇಖರ ಗೌಡ ಅನಾರು, ಸದಾಶಿವ ಶೆಟ್ಟಿ, ಡೊಂಬಯ ಗೌಡ, ಜಯಂತ ಚಾಕಟೆತ್ತಡಿ, ಅನುಪ್ ಬಂಗೇರ, ವರ್ಧನ್ ಬಂಗೇರ, ಉದಯಕುಮಾರ್ ಅನಾರು, ರವಿಪ್ರಸಾದ್ ಅನಾರು, ಫಾರೂಕ್ ಮಡಂಜೋಡಿ, ಅಬೂಬಕ್ಕರ್ ಹಳ್ಳಿಂಗೇರಿ ಮೊದಲಾದವರಿದ್ದರು. ಕಾರ್ಯಕ್ರಮದ ಮೊದಲು ಸನ್ಮಾನ್ಯ ವಸಂತ ಬಂಗೇರ ಅವರ ಭಾವಾಚಿತ್ರಕ್ಕೆ ಪುಷ್ಪಾರ್ಚನೆಗೈದು ಒಂದು ನಿಮಿಶ ಮೌನ ಪ್ರಾರ್ಥನೆ ಮಾಡಲಾಯಿತು.