ಬೆಳ್ತಂಗಡಿ; ಧರ್ಮಸ್ಥಳದ ವಸತಿ ಗೃಹದ ಮುಂಭಾಗದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಧರ್ಮಸ್ಥಳದ ಕಾವೇರಿ ವಸತಿಗೃಹದ ವರಾಂಡದಲ್ಲಿ ಮಲಗಿದ್ದ ವ್ಯಕ್ತಿ ಅಲ್ಲಿಯೇ ಮೃತಪಟ್ಟಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತನಿಗೆ ಸುಮಾರು 40 ರಿಂದ 45 ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದೆ. ಮೃತ ದೇಹದ ಮೇಲೆ ನಾಗರತ್ನ, ಪುಟ್ಟ, ಮಂಜಮ್ಮ ಲೋಲಾಕ್ಷಮ್ಮ, ತನುಶ್ರೀ ಎಂಬ ಹೆಸರುಗಳನ್ನು ಹಚ್ಚೆ ಹಾಕಿರುವುದು ಕಂಡು ಬಂದಿದ್ದು ಅದರ ಹೊರತಾಗಿ ಯಾವುದೇ ವಿಳಾಸದ ಗುರುತುಗಳು ಕಂಡು ಬಂದಿಲ್ಲ.
ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ವಾರಿಸುದಾರರು ಯಾರಾದರೂ ಇದ್ದಲ್ಲಿ ಧರ್ಮಸ್ಥಳ ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.