
ಬೆಳ್ತಂಗಡಿ; ವಸಂತ ಬಂಗೇರರದ್ದು ನಿಷ್ಟುರ ನೇರ ನಡೆನುಡಿಯ ವ್ಯಕ್ತಿತ್ವ. ಸತ್ಯವನ್ನು ಹೇಳಲು ಎಂದಿಗೂ ಹಿಂಜರಿದವರಲ್ಲ, ಯಾವುದೆ ಸನ್ನವೇಶ ಸಂದರ್ಭಗಳಿರಲಿ ಸತ್ಯವನ್ನು ನೇರವಾಗಿ ಹೇಳುವುದು ಅವರ ವಿಶೇಷಗುಣವಾಗಿತ್ತು.ರಾಜ್ಯ ಕಂಡ ಅಪರೂಪದ ರಾಜಕಾರಣಿ ಬಂಗೇರ ಅವರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳ್ತಂಗಡಿಯಲ್ಲಿ ಮಂಗಳವಾರ ಮಾಜಿ ಶಾಸಕ ಕೆ ವಸಂತ ಬಂಗೇರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಬಂಗೇರರು ಬಡವರ ಪರವಾಗಿ ಕೆಲಸ ಮಾಡಿದರೇ ಹೊರತು ತನಗಾಗಿ ಏನೂ ಮಾಡಿದವರಲ್ಲ ಅವರು ಐದು ಬಾರಿ ಶಾಸಕರಾದರೂ ಎಂದೂ ಮಂತ್ರಿ ಆಗಲು ಪ್ರಯತ್ನಿಸಿದವರಲ್ಲ. ಮೊದಲಬಾರಿಗೆ 1983 ರಲ್ಲಿ ನಾವು ಒಟ್ಟಿಗೆ ಶಾಸಕರಾದವರು ಅಂದಿನಿಂದ ಕೊನೆಯವರೆಗೆ ಆತ್ಮೀಯ ಸ್ನೇಹಿತರಾಗಿದ್ದರು ಎಂದು ಅವರು ಸ್ಮರಿಸಿದರು.
ಬೆಳ್ತಂಗಡಿಯ ನೂತನ ಬಸ್ ನಿಲ್ದಾಣಕ್ಕೆ ವಸಂತ ಬಂಗೇರರ ಹೆಸರು ಇಡುವ ವಿಚಾರ ಮತ್ತು ಬಂಗೇರರ ವೃತ್ತ ನಿರ್ಮಿಸಿ ಪುತ್ಥಳಿ ನಿರ್ಮಿಸುವ ಬೇಡಿಕೆಯನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಯವರು ಈ ಸಂದರ್ಭದಲ್ಲಿ ಪ್ರಕಟಿಸಿದರು.
