Home ಅಂಕಣಗಳು ತಾಲೂಕಿನ ಮಾಧ್ಯಮ ಕ್ಷೇತ್ರದಲ್ಲೊಂದು ಹೊಸ ಪ್ರಯತ್ನ “ಬೆಳ್ತಂಗಡಿ ಸಮಾಚಾರ”

ತಾಲೂಕಿನ ಮಾಧ್ಯಮ ಕ್ಷೇತ್ರದಲ್ಲೊಂದು ಹೊಸ ಪ್ರಯತ್ನ “ಬೆಳ್ತಂಗಡಿ ಸಮಾಚಾರ”

178
0

ಬೆಳ್ತಂಗಡಿ ತಾಲೂಕಿನ ಎಲ್ಲ ಸುದ್ದಿಗಳನ್ನೂ ಹಾಗೂ ಜಿಲ್ಲೆಯ, ಹಾಗೂ ಇತರ ಮಹತ್ವದ ಸುದ್ದಿಗಳನ್ನು ಯಾವುದೇ ರಾಗ ದ್ವೇಷವಿಲ್ಲದೆ ತಾಲೂಕಿನ ಜನರಿಗೆ ತಲುಪಿಸಬೇಕು ಎಂಬ ಗುರಿಯೊಂದಿಗೆ ಇಟ್ಟಿರುವ ಒಂದು ಪುಟ್ಟ ಹೆಜ್ಜೆ ‘ಬೆಳ್ತಂಗಡಿ ಸಮಾಚಾರ’ ಎಂಬ ಈ ಪ್ರಯತ್ನ.
ಮಾಧ್ಯಮ ಕ್ಷೇತ್ರ ಪ್ರತಿನಿತ್ಯ ಒಂದಲ್ಲ ಒಂದು ಹೊಸ ಬೆಳವಣಿಗೆಗಳನ್ನು ಕಾಣುತ್ತಲೇ ಇರುತ್ತದೆ, ಇಂದಿನ ಸುದ್ದಿಯನ್ನು ಇಂದೇ ನೋಡಿ ಎಂಬಲ್ಲಿಂದ ಈ ಕ್ಷಣದ ಸುದ್ದಿಯನ್ನು ಈ ಕ್ಷಣವೇ ನೋಡಿ ಎಂಬ ಹಂತಕ್ಕೆ ನಾವು ಬೆಳೆದಿದ್ದೇವೆ. ಆತುರದ ಕ್ಷಣದ ಸುದ್ದಿಯೇ ಇಂದಿನ ಟ್ರೆಂಡ್ ಆಗಿದೆ ಮೊದಲು ಯಾರು ಸುದ್ದಿಯನ್ನು ನಿಡುತ್ತಾರೆ ಎಂಬುದು ಮುಖ್ಯವಾಗುತ್ತಿದೆಯೇ ಹೊರತು ಎಷ್ಟು ಸಮಗ್ರವಾಗಿ, ನಿಖರವಾಗಿ ಸುದ್ದಿಯನ್ನು ನೀಡುತ್ತಾರೆ ಎಂಬ ವಿಚಾರಕ್ಕೆ ಯಾವುದೇ ಮಹತ್ವ ಇಲ್ಲದಂತಾಗಿದೆ. ಸಮಗ್ರವಾದ ಸುದ್ದಿಯನ್ನು ನೋಡಬೇಕಾದರೆ ಮಾರನೆಯ ದಿನದ ಪತ್ರಿಕೆಯನ್ನೇ ನೋಡಬೇಕಾದ ಅನಿವಾರ್ಯತೆ ಈಗಲೂ ಇದೆ. “ಬೆಳ್ತಂಗಡಿ ಸಮಾಚಾರ” ದೊಂದಿಗೆ ನಾವು ಬೆಳ್ತಂಗಡಿಯ ಜನರ ಮುಂದೆ ಬರುತ್ತಿದ್ದೇವೆ, ಮೊದಲು ನಮ್ಮಲ್ಲಿಯೇ ಎಂಬ ಆತುರತೆ ನಮಗಿಲ್ಲ ಯಾವುದೇ ಒಂದು ವಿಚಾರವಿರಲಿ ಅದನ್ನು ಸಮಗ್ರವಾಗಿ ಸರಿಯಾಗಿ,ಸತ್ಯವಿಚಾರಗಳನ್ನು ನೀಡಬೇಕು ಎಂಬುದು ನಮ್ಮ ಉದ್ದೇಶ, ಕೇವಲ ಅಪರಾಧದ ಸುದ್ದಿಗೆ ಮೀಸಲಿರಿಸಲಾಗಿರುವ ಒಂದು ಮಾಧ್ಯಮ ಇದಲ್ಲ ಎಂಬುದನ್ನು ಆರಂಭದಲ್ಲಿಯೇ ಹೇಳುತ್ತಿದ್ದೇವೆ. ಇತರ ಎಲ್ಲ ಸುದ್ದಿಗಳೊಂದಿಗೆ ಅಪರಾಧ ಸುದ್ದಿಗಳನ್ನು ನಾವು ಪ್ರಕಟಿಸುತ್ತೇವೆ, ನಮ್ಮ ಓದುಗರಿಗೆ ಸಮಗ್ರವಾದ ಒಂದು ಓದಿನ ಅನುಭವವನ್ನು ನೀಡಬೇಕು ಎಂಬುದು ನಮ್ಮ ತಂಡದ ಉದ್ದೇಶವಾಗಿದೆ, ಜನರಿಗೆ ತಲುಪಬೇಕಾದ ದೇಶ ವಿದೇಶದ ಸುದ್ದಿಗಳು, ರಾಜ್ಯದ ಸುದ್ದಿಗಳನ್ನು, ಮಾಹಿತಿಪೂರ್ಣ ಲೇಖನಗಳನ್ನು, ರಾಜಕೀಯ ವಿಶ್ಲೇಷಣೆಗಳನ್ನು ನಿರೀಕ್ಷಿಸಬಹುದಾಗಿದೆ. ತಾಲೂಕಿನ ಸಾಧಕರನ್ನು ಪರಿಚಯಿಸುವುದರೊಂದಿಗೆ ತಾಲೂಕಿನಲ್ಲಿ ನಡೆಯುವ ಸಣ್ಣ, ದೊಡ್ಡ ಕಾರ‍್ಯಕ್ರಮಗಳ ಸುದ್ದಿಗಳನ್ನು ಜನರಿಗೆ ತಲುಪಿಸುವುದು ನಮ್ಮ ಉದ್ದೇಶ, ಶೋಷಿತ ಸಮುದಾಯಗಳ ಪರವಾಗಿ, ಸುದ್ದಿಯೇ ಆಗದ ಜನರ ಪರವಾಗಿ ಸುದ್ದಿಗಳು ಬರಬೇಕಾಗಿದೆ. ಅಂಚಿಗೆ ತಳ್ಳಲ್ಪಟ್ಟವರ, ನೋವುಗಳಿಗೂ, ಅವರ ಧ್ವನಿಗೂ ಒಂದು ಅವಕಾಶ ಬೇಕಾಗಿದೆ. ಕಳೆದ ಎರಡುವರೆ ದಶಕಗಳಿಂದ ಬೆಳ್ತಂಗಡಿಯಲ್ಲಿಯೇ ಇದ್ದುಕೊಂಡು ಪತ್ರಕರ್ತನಾಗಿ ದುಡಿದ ಅನುಭವವಿದೆ.ಈ ಅನುಭವವನ್ನು ಇಟ್ಟುಕೊಂಡು ಹೊಸ ಪ್ರಯತ್ನವೊಂದಕ್ಕೆ ಮುಂದಾಗುತ್ತಿದ್ದೇನೆ. ಈ ಪ್ರಯತ್ನದಲ್ಲಿ ನಿಮ್ಮೆಲ್ಲರ ಸಹಕಾರ ಬೆಂಬಲ ಸದಾ ಇರಲಿದೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದೇನೆ.
ಕಳೆದ ಕೆಲವು ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿರುವ ನಮ್ಮದೇ ‘ಬೆಳ್ತಂಗಡಿ ಸಮಾಚಾರ” ಯೂಟ್ಯೂಬ್ ಚಾನೆಲ್ ಮುಂದೆಯೂ ಅದೇರೀತಿಯಾಗಿ ಮುಂದುವರಿಯಲಿದೆ ಮಹತ್ವದ ವೀಡಿಯೋ ಸುದ್ದಿಗಳನ್ನು ಯೂಟ್ಯೂಬ್ ನಲ್ಲಿ ಮುಂದೆಯೂ ನೋಡಬಹುದಾಗಿದೆ.
ಮುಂದೆಯೂ ನಿಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ.

ನಿಮ್ಮವನೇ ಆದ
ಶಿಬಿ ಧರ್ಮಸ್ಥಳ

ಬೆಳ್ತಂಗಡಿ ಸಮಾಚಾರ ತಂಡದ ಪರವಾಗಿ

LEAVE A REPLY

Please enter your comment!
Please enter your name here