ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಡಾ. ಹೇಮಾವತಿ ಹೆಗ್ಗಡೆ ಮಾಡಿದ ಪರಿವರ್ತನೆಗಳಿಂದಾಗಿ ಆಧುನಿಕ ಸಮಾಜದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮಹಿಳೆಯರು ಶಕ್ತಿ ಗಳಿಸುವಂತಾಗಿದೆ. ಇಂದು ಹೆಣ್ಣು ಮಕ್ಕಳು ಆತ್ಮವಿಶ್ವಾಸದಿಂದ ಬದುಕುತಿದ್ದು, ಸಮೃದ್ಧ, ಸುಸಂಸ್ಕøತ ಸಮಾಜ ನಿರ್ಮಾಣ ಕಾರ್ಯದಲ್ಲಿ ತಾಯಂದಿರ ಕೊಡುಗೆ ಅನನ್ಯವಾಗಿದೆ’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್. ಮಂಜುನಾಥ್ ಹೇಳಿದರು.
ಅವರು ಭಾನುವಾರ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಕಲಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ (ರಿ), ಗುರುವಾಯನಕೆರೆ ಇದರ ನೇತೃತ್ವದಲ್ಲಿ ‘ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ – 2024’ ಉದ್ಘಾಟಿಸಿ ಮಾತನಾಡಿದರು.
‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆರಂಭವಾದ ಜ್ಞಾನವಿಕಾಸ ಕಾರ್ಯಕ್ರಮಕ್ಕೆ ಆರಂಭದಲ್ಲಿ ಸೇರಿದವರು ಅದೇ ಅಭಿಮಾನವನ್ನು ಇಂದಿಗೂ ಇಟ್ಟುಕೊಂಡಿದ್ದಾರೆ. ಮನೆಯೊಳಗಿದ್ದ ಮಹಿಳೆಯನ್ನು ಹೊರ ಬರಿಸಿ ಸಮಾಜದ ಜತೆ ಬೆರೆಯುವಂತೆ ಮಾಡಿದ್ದು ಸಾಹಸ. ಆ ಬಳಿಕ ಹೆಣ್ಣಿಗೆ ಸಾಮಾಜಿಕ ಸ್ಥಾನಮಾನ ಮತ್ತು ಆಕೆಯ ಅಭಿಪ್ರಾಯಗಳಿಗೆ ಸಾಮಾಜಿಕ ಮನ್ನಣೆ ಸಿಗುವಂತಾಯಿತು’ ಎಂದು ಅವರು ಹೇಳಿದರು.
‘ಹೆಣ್ಣು – ಗಂಡು ಎಂಬ ತಾರತಮ್ಯ ಸಲ್ಲದು. ಹೆಣ್ಣು ಮಕ್ಕಳು ಗಂಡನ ಬಳಿ ಆರ್ಥಿಕ ಅವಲಂಬನೆಗೆ ಒಳಗಾಗದೆ ವಿದ್ಯಾವಂತರಾಗಿ ಉದ್ಯೋಗವಂತರಾಗಬೇಕು. ಯಾವಾಗ ಹೆಣ್ಣು ಶಿಕ್ಷಿತಳಾಗುತ್ತಾಲೋ ಆಗ ಸಬಳೀಕರಣದ ವೇಗ ಹೆಚ್ಚುವುದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕುವೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ ವಹಿಸಿದ್ದರು.

‘ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಭವಿಷ್ಯ ಮತ್ತು ಪೋಷಕರ ಪಾತ್ರ’ ಎಂಬ ವಿಚಾರದಲ್ಲಿ ಉಜಿರೆ ಎಸ್.ಡಿ.ಎಂ.ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ವಂದನಾ ಜೈನ್ ವಿಚಾರ ಮಂಡಿಸಿದರು.
ವೇದಿಕೆಯಲ್ಲಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷೆ ಶಾರದಾ ಆರ್ ರೈ, ಉಜಿರೆ ಸಂಧ್ಯಾ ಪ್ರೆಶ್ ಪ್ಯಾಕೇಜಿಂಗ್ ಯುನಿಟ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಚನಾ ರಾಜೇಶ್ ಪೈ ಇದ್ದರು.
ಉರುವಾಲು ಸತ್ಯಶ್ರೀ ಜ್ಞಾನ ವಿಕಾಸ ಕೇಂದ್ರದ ವಿಜಯ ಹಾಗೂ ಮೊಗ್ರು ಆರಾಧನಾ ಜ್ಞಾನ ವಿಕಾಸ ಕೇಂದ್ರದ ಜಾನಕಿ ಅನಿಸಿಕೆ ವ್ಯಕ್ತಪಡಿಸಿದರು.
ಸಾಧಕರಾದ ಗುರುವಾಯನಕೆರೆ ಪವಿತ್ರ ಜ್ಞಾನ ವಿಕಾಸ ಕೇಂದ್ರದ ಪ್ರಭಾವತಿ, ಸಾವ್ಯ ನಿಸರ್ಗ ಜ್ಞಾನ ವಿಕಾಸ ಕೇಂದ್ರದ ಸರೋಜಿನಿ, ಕರಿಮಣೇಲು ನಂದಾದೀಪ ಜ್ಞಾನ ವಿಕಾಸ ಕೇಂದ್ರದ ಯಮುನಾ, ಉರುವಾಲು ಸತ್ಯಶ್ರೀ ಜ್ಞಾನ ವಿಕಾಸ ಕೇಂದ್ರದ ವಿಜಯ ಇವರನ್ನು ಸನ್ಮಾನಿಸಲಾಯಿತು. 70 ವರ್ಷ ದಾಟಿದ ಹಿರಿಯ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು.
ಟೈಲರಿಂಗ್ ಕಲಿತ ಫಲಾನುಭವಿಗಳಿಗೆ ಪ್ರಮಾಣಪತ್ರ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಅಚ್ಚಾಡಿ ಸೌಭಾಗ್ಯ ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ಗುಲಾಬಿ ಮತ್ತು ಬಳಗ ಪ್ರಾರ್ಥಿಸಿದರು. ಗ್ರಾಮಾಭಿವೃದ್ದಿ ಯೋಜನೆಯ ಬಿ.ಸಿ.ಟ್ರಸ್ಟ್ ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಪೂಜಾರಿ ಪಿ ಸ್ವಾಗತಿಸಿದರು. ಮೇಲ್ವಿಚಾರಕರಾದ ವಸಂತ ಮತ್ತು ವಿದ್ಯಾ ನಿರೂಪಿಸಿದರು. ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಹರಿಣಿ ವಂದಿಸಿದರು.