Home ಸ್ಥಳೀಯ ಸಮಾಚಾರ ಅನಧಿಕೃತ ಗೂಡಂಗಡಿಗಳಿಗೆ ಉಪ್ಪಿನಂಗಡಿ ಅರಣ್ಯ ಇಲಾಖೆ ಖಡಕ್ ಡೆಡ್‌ಲೈನ್: ಮಧ್ಯಾಹ್ನದೊಳಗೆ ತೆರವುಗೊಳಿಸಲು ಸೂಚನೆ

ಅನಧಿಕೃತ ಗೂಡಂಗಡಿಗಳಿಗೆ ಉಪ್ಪಿನಂಗಡಿ ಅರಣ್ಯ ಇಲಾಖೆ ಖಡಕ್ ಡೆಡ್‌ಲೈನ್: ಮಧ್ಯಾಹ್ನದೊಳಗೆ ತೆರವುಗೊಳಿಸಲು ಸೂಚನೆ

0
6

ಬೆಳ್ತಂಗಡಿ :ಪೆರಿಯಶಾಂತಿ ಇಂದ( ಜುಲೈ 20 ) ಕುದ್ರಾಯವರೆಗಿನ ಮೀಸಲು ಅರಣ್ಯದ ಪಕ್ಕದ ರಸ್ತೆಯಲ್ಲಿ ಅನಧಿಕೃತವಾಗಿ ಇರುವ ಗೂಡಂಗಡಿಗಳಿಗೆ ಇಂದು ಮಧ್ಯಾಹ್ನದೊಳಗೆ ತೆರವುಗೊಳಿಸುವಂತೆ ಉಪ್ಪಿನಂಗಡಿ ವಲಯ ಪ್ರೊಫೆಷನಲ್ ಅರಣ್ಯಾಧಿಕಾರಿ ಹಸ್ತ ಶೆಟ್ಟಿ ಮತ್ತು ವಲಯ ಅರಣ್ಯಾಧಿಕಾರಿ ರಾಘವೇಂದ್ರ ಖಡಕ್ ಸೂಚನೆ ನೀಡಿದ್ದಾರೆ.

ಪ್ರಜಾಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ದಾಖಲಾಗಿರುವ ದೂರುಗಳ ಹಿನ್ನೆಲೆ ಮತ್ತು ಪ್ರಧಾನಮಂತ್ರಿ ಕಾರ್ಯಾಲಯದಿಂದ ಬಂದಿರುವ ಸೂಚನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪೆರಿಯಶಾಂತಿಯಿಂದ ಕುದ್ರಾಯವರೆಗಿನ ಮೀಸಲು ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವವರಿಗೆ ಮೌಖಿಕ ಆದೇಶ ನೀಡಲಾಗಿತ್ತು. ಈ ವ್ಯಾಪಾರಸ್ಥರು ಜುಲೈ 15ರೊಳಗೆ ಗೂಡಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುವ ಭರವಸೆ ನೀಡಿದ್ದರೂ ಈಗಾಗಲೇ ನಿಗದಿತ ಅವಧಿ ಕಳೆದರೂ ಇವುಗಳಲ್ಲಿ ಬಹುಪಾಲು ಇನ್ನೂ ತೆರವುಗೊಳ್ಳಿಲ್ಲ ಎಂದು ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದಾಗಿ ಅರಣ್ಯ ಪ್ರದೇಶದ ಶಾಂತತೆಯನ್ನು ಹದಗೆಡಿಸುವ ಸಂದರ್ಭ ಉಂಟಾಗಿದ್ದು, ಇದರ ಬೆನ್ನಲ್ಲೇ ವ್ಯಾಪಾರಿಗಳು ರಸ್ತೆ ಬದಿ ಇಡುತ್ತಿರುವ ಹಲಸಿನ ಹಣ್ಣು, ಅನನಾಸು ಮುಂತಾದ ಹಣ್ಣುಗಳ ವಾಸನೆಗೆ ಆಕರ್ಷಿತರಾಗಿ ಆನೆಗಳು ಗೂಡಂಗಡಿ ಕಡೆಗೆ ಬರಲಾರಂಭಿಸಿದೆ. ಪರಿಣಾಮವಾಗಿ ಆನೆಗಳ ಚಲನವಲನಕ್ಕೆ ತೊಂದರೆ ಉಂಟಾಗುತ್ತಿದೆ. ಈಗಾಗಲೇ ಈ ಭಾಗದಲ್ಲಿ ಆನೆ ದಾಳಿ ವರದಿಯಾಗಿರುವ ಹಿನ್ನೆಲೆ, ಜೈವಿಕ ಜೀವವೈವಿಧ್ಯ ಹಾಗೂ ಸಾರ್ವಜನಿಕರ ರಕ್ಷಣೆಯ ದೃಷ್ಟಿಯಿಂದ ಅನಧಿಕೃತ ವ್ಯಾಪಾರ ತಕ್ಷಣವೇ ನಿಲ್ಲಿಸಬೇಕಾಗಿದೆ ಎಂದು ಅರಣ್ಯಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

“ಅನಧಿಕೃತವಾಗಿ ಗೂಡಂಗಡಿ ನಡೆಸಿ ಆನೆ ಅಥವಾ ಇತರ ಕಾಡುಪ್ರಾಣಿಗಳಿಂದ ಸಾರ್ವಜನಿಕರಿಗೆ ಏನೇನಾದರೂ ಅನಾಹುತ ಸಂಭವಿಸಿದರೆ, ಅದರ ಹೊಣೆಗಾರರು ನಾವಲ್ಲ. ಕಾನೂನು ಕ್ರಮ ತಪ್ಪದೇ ಜರುಗಲಿದೆ,” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆದರೂ ಮಧ್ಯಾಹ್ನದೊಳಗೆ ಈ ವ್ಯಾಪಾರಸ್ಥರು ತಮ್ಮ ಗೂಡಂಗಡಿಗಳನ್ನು ತೆರವುಗೊಳಿಸದಿದ್ದರೆ, ಪೊಲೀಸ್ ಭದ್ರತೆ ಜೊತೆಗಿಸಿಕೊಂಡು ಅರಣ್ಯ ಇಲಾಖೆ ನೇರವಾಗಿ ಕಾರ್ಯಾಚರಣೆಗೆ ಇಳಿಯುವುದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿದೆ.

NO COMMENTS

LEAVE A REPLY

Please enter your comment!
Please enter your name here