ಬೆಳ್ತಂಗಡಿ; ‘ಅಹಿಂಸೆಯಿಂದ ಸುಖ ತ್ಯಾಗದಿಂದ ಶಾಂತಿ’ ಎಂಬ ಸಂದೇಶದೊಂದಿಗೆ ವೇಣೂರು ಶ್ರೀ ಬಾಹುಬಲಿಯ ಮಹಾ ಮಸ್ತಕಾಭಿಷೇಕ ಫೆ.22 ರಂದು ಆರಂಭಗೊಳ್ಳಲಿದೆ.
ಯುಗಳಮುನಿಗಳಾದ ಪರಮಪೂಜ್ಯ 108 ಶ್ರೀ ಅಮೋಘ ಕೀರ್ತಿ ಮಹಾರಾಜರು ಹಾಗೂ ಪರಮಪೂಜ್ಯ 108 ಶ್ರೀ ಅಮರ ಕೀರ್ತಿ ಮಹಾರಾಜ ಇವರ ಪಾವನ ಸಾನಿಧ್ಯದಲ್ಲಿ,ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ, ಮೂಡಬಿದಿರೆ,ಶ್ರವಣಬೆಳಗೊಳ, ನರಸಿಂಹರಾಜಪುರ, ಲಕ್ಕವಳ್ಳಿ,ಹೊಂಬುಜ ಆರತೀಪುರ,ಸೋಂದ, ಅರಹಂತಗಿರಿ,ಕನಕಗಿರಿ ಕಂಬದಹಳ್ಳಿ,ಕಾರ್ಕಳ,ಶ್ರೀ ಕ್ಷೇತ್ರ ಗಾಂದಣಿ,ವರೂರು, ಕೊಲ್ಲಾಪುರ,ಜಿನಕಂಚಿ ಮೊದಲಾದ ಜೈನ ಮಠಗಳ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ.
ಗುರುವಾರ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ.
ಧಾರ್ಮಿಕ ಸಭೆ ಕಾರ್ಯಕ್ರಮವನ್ನು
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಪರಾಹ್ನ 3ಗಂಟೆಗೆ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು.
ಸಚಿವ ದಿನೇಶ್ ಗುಂಡೂರಾವ್ ಸ್ಮರಣ ಸಂಚಿಕೆ ಬಿಡುಗಡೆ, ಸಂಸದ ನಳಿನ್ ಕುಮಾರ್ ಕಟೀಲ್ ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸಲಿದ್ದಾರೆ ಮಾಜಿ ಸಚಿವ ಅಭಯ ಚಂದ್ರ ಜೈನ್, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್ ಶಾಸಕ ಹರೀಶ್ ಪೂಂಜ, ಎಂಎಲ್ ಸಿ ಹರೀಶ್ ಕುಮಾರ್ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ವೇಣೂರು ಗ್ರಾಪಂ ಅಧ್ಯಕ್ಷ ನೇಮಯ್ಯ ಕುಲಾಲ್ ಮತ್ತಿತರರು ಭಾಗವಹಿಸಲಿದ್ದಾರೆ. ಸಂಜೆ 7:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭರತನಾಟ್ಯ,ಯಕ್ಷಗಾನ ಜರಗಲಿದೆ.
-ಸಂಜೆ 6:45 ರಿಂದ ಮಹಾಮಸ್ತಕಾಭಿಷೇಕ-
ಫೆ. 22 ರಿಂದ ಮಾ.1ರ ತನಕ ಪ್ರತಿದಿನ ಸಂಜೆ ಗಂಟೆ 6:45 ರಿಂದ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಜಲ, ಸೀಯಾಳ,ಹಾಲು, ಇಕ್ಷುರಸ,ಕಲ್ಕರಸ, ಅರಿಶಿಣ ಹುಡಿ, ಕಷಾಯ,ಗಂಧ,ಕೇಸರಿ, ಚಂದನ,ಅಷ್ಟಗಂಧ ಮೊದಲಾದ ದ್ರವ್ಯಗಳ ಅಭಿಷೇಕದ ಬಳಿಕ ಪುಷ್ಪವೃಷ್ಠಿ ನಡೆಯಲಿದೆ.
ಪ್ರಥಮ ನಾಲ್ಕು ದಿನ108 ಕಲಶ, ಬಳಿಕ ಮೂರು ದಿನ 216 ಕಲಶ, ಎಂಟನೇ ದಿನ 504 ಕಲಶಗಳಿಂದ ಮಹಾಮಸ್ತಕಾಭಿಷೇಕ ಸೇವಾ ಕರ್ತೃಗಳಿಂದ ನಡೆಯಲಿದ್ದು,9ನೇ ದಿನ 1008 ಕಲಶಗಳೊಂದಿಗೆ ಸಮಿತಿ ವತಿಯಿಂದ ಮಹಾಮಸ್ತಕಾಭಿಷೇಕ ನಡೆಯಲಿದೆ.
-ಪೂರ್ವಭಾವಿ ತಯಾರಿ-
ಸರಕಾರದ ವತಿಯಿಂದ ಮಹಾಮಸ್ತಕಾಭಿಷೇಕ ಬಗ್ಗೆ ರಸ್ತೆ ದುರಸ್ತಿ ದೀಪಾಲಂಕಾರ, ಅಭಿವೃದ್ಧಿ ಕಾಮಗಾರಿ, ನವೀಕರಣ ಇತ್ಯಾದಿ ಬಹುತೇಕ ಪೂರ್ಣಗೊಂಡಿದೆ . ಸಮಿತಿ ವತಿಯಿಂದ ಧಾರ್ಮಿಕ ವಿಧಿ ವಿಧಾನಗಳಿಗೆ ಬೇಕಾದ ಅಗತ್ಯ ತಯಾರಿಗಳು ನಡೆಯುತ್ತಿವೆ. ಈ ಶತಮಾನದ ಮೂರನೇ ಮಹಾಮಸ್ತಕಾಭಿಷೇಕಕ್ಕೆ ವೇಣೂರು ಸಂಪೂರ್ಣ ಸಿದ್ಧಗೊಂಡಿದೆ. ಕೊನೆಯ ಹಂತದ ಕೆಲವೊಂದು ಕೆಲಸಗಳು ಸಾಗುತ್ತಿವೆ.
ಪ್ರತಿದಿನ ಸುಮಾರು 20 ಸಾವಿರ ಮಂದಿಗೆ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಇದರ ಜತೆ ಹೊರ ಭಾಗಗಳಿಂದ ಆಗಮಿಸುವ ಜನರಿಗೆ ವಸತಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಟ್ಟಳಿಗೆ ಕಾಮಗಾರಿ ಪೂರ್ಣಗೊಂಡಿದ್ದು ಈಗಾಗಲೇ ಸಾವಿರಾರು ಮಂದಿ ವೀಕ್ಷಣೆ ನಡೆಸಿದ್ದಾರೆಹಲವು ಸುತ್ತಿನ ಪೂರ್ವಭಾವಿ ಸಭೆಗಳು ಈಗಾಗಲೇ ನಡೆದಿದ್ದು ಅಗತ್ಯ ಇಲಾಖೆಗಳ ಅಧಿಕಾರಿ ವರ್ಗ ವೇಣೂರಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಕೈಗೊಂಡಿದೆ.