‘




ಬೆಂಗಳೂರು : ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾದ ಎಫ್‌ಐಆರ್ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ಇಂದು ವಿಚಾರಣೆಗೆ ಬಂದಿದ್ದು, ದೂರುದಾರ ಎಸ್ ಬಿ ಇಬ್ರಾಹಿಂ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಸ್ ಬಾಲನ್ ಅವರು ‘ಹರೀಶ್ ಪೂಂಜಾ ಶಾಸಕ ಸ್ಥಾನಕ್ಕೆ ಅನರ್ಹವಾದ ವ್ಯಕ್ತಿ. ಸಾಂವಿಧಾನಿಕ ಕರ್ತವ್ಯಗಳ ಅರಿವಿಲ್ಲದ ವ್ಯಕ್ತಿ ಶಾಸಕನಾಗಿ ಇರಕೂಡದು’ ಎಂದರು.
“ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿರುವ ಸಂದರ್ಭದಲ್ಲಿ ಕೋಮುಗಲಭೆ ಹುಟ್ಟುಹಾಕಬೇಕು ಎಂಬ ಕಾರಣಕ್ಕಾಗಿಯೇ ಶಾಸಕ ಹರೀಶ್ ಪೂಂಜಾ ತೆಕ್ಕಾರಿನಲ್ಲಿ ಕೋಮುದ್ವೇಷದ ಭಾಷಣ ಮಾಡಿದ್ದಾರೆ. ಶಾಸಕಾಂಗಕ್ಕೆ ಅನರ್ಹವಾಗಿರುವ ಇವರ ವಿರುದ್ದ ಇದಲ್ಲದೇ ಏಳು ಎಫ್ಐಆರ್ ದಾಖಲಾಗಿದೆ. ಏಳೂ ಎಫ್ಐಆರ್ ಗಳೂ ಪುನರಾವರ್ತಿತ ಆಪರಾಧವೇ ಆಗಿದೆ. ಎಲ್ಲಾ ಎಫ್ಐಆರ್ ಗಳಲ್ಲೂ ಜಾಮೀನು ತೆಗೆದುಕೊಂಡಿದ್ದಾರೆ. ಅಪರಾಧವನ್ನು ಪುನರಾವರ್ತಿಸಬಾರದು ಎಂಬ ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ” ಎಂದು ಬಾಲನ್ ವಾದಿಸಿದರು.
ಚಾರ್ಜ್ ಶೀಟ್ ಈಗಾಗಲೇ ಸಲ್ಲಿಸಲಾಗಿದ್ದು, ಎಫ್ಐಆರ್ ರದ್ದತಿಗೆ ಕೋರಿದ ಅರ್ಜಿಯೇ ಮಾನ್ಯತೆ ಕಳೆದುಕೊಂಡಿದೆ. ಪೊಲೀಸರು ಮತ್ತು ಸರ್ಕಾರ ಸರಿಯಾದ ರೀತಿಯ ಕ್ರಮ ಕೈಗೊಂಡಿದೆ. ದ್ವೇಷ ಭಾಷಣಗಳು ಗಲಭೆಯನ್ನು ಸೃಷ್ಟಿಸುತ್ತಿದೆ. ಹಾಗಾಗಿ ಅರ್ಜಿಯನ್ನೇ ತಿರಸ್ಕೃತಗೊಳಿಸಬೇಕು ಎಂದು ಅಡಿಷನಲ್ ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಜಗದೀಶ್ ವಾದಿಸಿದರು.
ವಾದ ಆಲಿಸಿದ ನ್ಯಾಯಮೂರ್ತಿ ಆರ್ ರಾಚಯ್ಯ ಅವರು ಅರ್ಜಿಯನ್ನು ಪರಿಷ್ಕರಿಸಿ ಸಲ್ಲಿಸುವಂತೆ ದೂರುದಾರರಿಗೆ ಸೂಚಿಸಿ ಪ್ರಕರಣದ ವಿಚಾರಣೆಯನ್ನು ಮೇ 22 ಕ್ಕೆ ಮುಂದೂಡಿದರು.
