Home ಶಾಲಾ ಕಾಲೇಜು ಎಸ್.ಡಿ.ಎಂ. ಸಂಭ್ರಮ – 2026 ಅಂತರ ಶಾಲಾ ನೃತ್ಯ ಸ್ಪರ್ಧೋತ್ಸವದಲ್ಲಿ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಗೆ...

ಎಸ್.ಡಿ.ಎಂ. ಸಂಭ್ರಮ – 2026 ಅಂತರ ಶಾಲಾ ನೃತ್ಯ ಸ್ಪರ್ಧೋತ್ಸವದಲ್ಲಿ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಗೆ ಪ್ರಥಮ ಸ್ಥಾನ

0

ಉಜಿರೆ: ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನಾಚರಣೆಯ ಅಂಗವಾಗಿ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ (ರಿ.), ಉಜಿರೆ ವತಿಯಿಂದ ಆಯೋಜಿಸಲಾದ ‘ಎಸ್.ಡಿ.ಎಂ. ಸಂಭ್ರಮ – 2026’ ಅಂತರ ಶಾಲಾ ನೃತ್ಯ ಸ್ಪರ್ಧೋತ್ಸವದಲ್ಲಿ ಉಜಿರೆಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ (ರಾಜ್ಯ ಪಠ್ಯಕ್ರಮ) ಪ್ರಥಮ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿದೆ.

ನವೆಂಬರ್ 25 ಮತ್ತು 26ರಂದು ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆದ ಎರಡು ದಿನಗಳ ಈ ಸಾಂಸ್ಕೃತಿಕ ಸ್ಪರ್ಧೋತ್ಸವದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕಲಾತ್ಮಕ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಸ್ಪರ್ಧೋತ್ಸವವನ್ನು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್. ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಕಲಾಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಪೂಜ್ಯ ಹೆಗ್ಗಡೆಯವರ ಸಮಾಜಮುಖಿ ಚಿಂತನೆಗಳು ಹಾಗೂ ಜನಪರ ಯೋಜನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೋತ್ಸವವನ್ನು ಆಯೋಜಿಸಲಾಗಿತ್ತು.

ವಾತ್ಸಲ್ಯ, ಗೆಳತಿ, ಜ್ಞಾನವಿಕಾಸ, ನಮ್ಮೂರು ನಮ್ಮ ಕೆರೆ, ಸುಜ್ಞಾನನಿಧಿ, ಜನಮಂಗಲ, ಜನಜಾಗೃತಿ, ನವಚೇತನ, ಶುದ್ಧಗಂಗಾ ಹಾಗೂ ಜ್ಞಾನದೀಪ ಸೇರಿದಂತೆ ವಿವಿಧ ಸಮಾಜಮುಖಿ ಯೋಜನೆಗಳ ಆಶಯಗಳನ್ನು ತಂಡಗಳಿಗೆ ಹೆಸರು ನೀಡುವ ಮೂಲಕ ಪರಿಚಯಿಸಲಾಯಿತು. ಒಟ್ಟು 14 ಶಾಲೆಗಳು ಸ್ಪರ್ಧೋತ್ಸವದಲ್ಲಿ ಭಾಗವಹಿಸಿದ್ದವು. ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯ ರಾಜ್ಯ ಪಠ್ಯಕ್ರಮ ಉಜಿರೆಯ ನೃತ್ಯ ತಂಡದಲ್ಲಿ ಮನಸ್ವಿ ಗೌಡ ಇವರಿಗೆ ಅತ್ಯುತ್ತಮ ನೃತ್ಯಗಾರ್ತಿ ಪ್ರಶಸ್ತಿ ಹಾಗೂ ನಾಟಕ ಪ್ರದರ್ಶನ ತಂಡದಲ್ಲಿ ಅದ್ವಿತಿ ರಾವ್ ಇವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

ಶಾಲೆಯ ಈ ಗಮನಾರ್ಹ ಸಾಧನೆಗೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾಲಕ್ಷ್ಮಿ ನಾಯಕ್, ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಮಾರ್ಗದರ್ಶಕರ ಸಮರ್ಪಣಾ ಮನೋಭಾವವನ್ನು ಅಭಿನಂದಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version