
ಬೆಳ್ತಂಗಡಿ; ವಿದ್ಯಾ ದೇಗುಲವಾದ ಶಾಲೆ ಜ್ಞಾನ ಪಸರಿಸುವ ಕೇಂದ್ರವೇ ಹೊರತು ರಾಜಕೀಯ ದ್ವೇಷ ಬಿತ್ತುವ, ಎಳೆಯ ಮಕ್ಕಳನ್ನು ಯಾವುದೋ ಪಕ್ಷ, ನಾಯಕರು ಅಥವಾ ಸರಕಾರದ ವಿರುದ್ಧ ಎತ್ತಿ ಕಟ್ಟುವ ಸ್ಥಳವಲ್ಲ. ಇಂತಹ ವಿಚಾರದ ಕನಿಷ್ಠ ಪರಿಜ್ಞಾನವೂ ಇಲ್ಲದೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿರುವ ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿರುವ ಪ್ರತಿಷ್ಠಿತ ಕೆ ಪಿ ಎಸ್ ಶಾಲೆ ಪೂಂಜಾಲಕಟ್ಟೆ ಇಲ್ಲಿ ಕೀಳು ಮಟ್ಟದ ಭಾಷೆ ಜೊತೆಗೆ ಟೀಕೆ ಮಾಡಿರುವುದು ಶಾಸಕರ ಮಾನಸಿಕತೆ ಯನ್ನು ತೋರಿಸುತ್ತದೆ. ಅಪ್ರಾಪ್ತರ ಮುಂದೆ ರಾಜಕೀಯ ದ್ವೇಷ ಭಾಷಣ ಮಾಡಿರುವುದು ಖಂಡನೀಯ. ಮಕ್ಕಳಲ್ಲಿ ದೇಶದ ಹಾಗೂ ಸಮಾಜದ ಧನಾತ್ಮಕ ವಿಚಾರಗಳಾದ ಭವಿಷ್ಯದ ಚಿಂತನೆ, ವೈಜ್ಞಾನಿಕ ಮನೋಭಾವ, ಸಂವಿಧಾನಿಕ ದೇಶದ ಹಿರಿಮೆ ಹೆಚ್ಚಿಸುವ ವಿಚಾರಗಳನ್ನು ತಿಳಿಸಿ, ದೇಶ ನಿರ್ಮಾಣದ ವಿಚಾರಗಳನ್ನು ಮಾತನಾಡಬಹುದಿತ್ತು. ಅಭಿನಂದನಾ ಕಾರ್ಯಕ್ರಮದ ಹೆಸರಲ್ಲಿ ಮತಯಾಚನೆ ಮಾಡಿದಂತೆ ಕಂಡುಬಂದಿರುವುದು ಬೇಸರದ ಸಂಗತಿ. ಮಕ್ಕಳಲ್ಲಿ ಶಿಕ್ಷಣ, ಸಂಸ್ಕಾರ, ಸರಕಾರಿ ಶಾಲೆಯ ಕುರಿತು ಅರಿವು ಮೂಡಿಸುವ ಮಾತನಾಡದಿರುವುದು ರಾಜಕೀಯ ಅಪ್ರಬುದ್ಧತೆಯನ್ನು ಸೂಚಿಸುತ್ತಿದೆ. ಈ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸರಕಾರಿ ಶಾಲೆಗಳ ಪೋಷಕರು ಎಚ್ಚೆತ್ತುಕೊಂಡು ಸರಿಯಾದ ಪಾಠ ಕಲಿಸಬೇಕಿದೆ. ಇಲ್ಲವಾದಲ್ಲಿ ಎಳೆಯ ಮಕ್ಕಳು ಇಂತಹಾ ರಾಜಕೀಯ ಭಾಷಣದಿಂದ ಪ್ರೇರೇಪಿತರಾಗಿ ದಾರಿ ತಪ್ಪುವ ಸಾಧ್ಯತೆ ಇದೆ. ಶಾಸಕರ ಈ ನಡೆ ಪ್ರಶ್ನಾರ್ಹವಾಗಿದ್ದು ಕಠಿಣ ಕಾನೂನು ಕ್ರಮ ಕೈಗೊಂಡು, ಮುಂದೆ ಇಂತಹ ಘಟನೆ ಎಲ್ಲೂ ನಡೆಯದಂತೆ ಸಂಬಂಧಿಸಿದ ಇಲಾಖೆಗಳು ಮಾದರಿಯಾಗಬೇಕಿದೆ ಎಂದು ದ.ಕ. ಜಿಲ್ಲಾ ನಾಮನಿರ್ದೇಶಿತ ಕೆ.ಡಿ.ಪಿ. ಸದಸ್ಯ ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲಾ ಬೆಳ್ತಂಗಡಿ ಶಾಸಕರ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.