Home ಸ್ಥಳೀಯ ಸಮಾಚಾರ ಪುಂಜಲಾಕಟ್ಟೆ ಶಾಲಾ ಕಾರ್ಯಕ್ರಮದಲ್ಲಿ ರಾಜಕೀಯ ದ್ವೇಷ ಭಾಷಣ : ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ...

ಪುಂಜಲಾಕಟ್ಟೆ ಶಾಲಾ ಕಾರ್ಯಕ್ರಮದಲ್ಲಿ ರಾಜಕೀಯ ದ್ವೇಷ ಭಾಷಣ : ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ ಯುವ ಕಾಂಗ್ರೆಸ್ ನಿಂದ ದೂರು

0

ಬೆಳ್ತಂಗಡಿ: ಸರ್ಕಾರಿ ಪ್ರಾಯೋಜಿತ ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಂಡು, ರಾಜಕೀಯ ಪಕ್ಷದ ವಿರುದ್ಧ ಹಾಗೂ ನಿರ್ದಿಷ್ಟ ನಾಯಕರ ಪರ ಘೋಷಣೆ ಕೂಗಿಸಿದ್ದಾರೆಂದು ಆರೋಪಿಸಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ವಿರುದ್ಧ ಯುವ ಕಾಂಗ್ರೆಸ್ ನಿಂದ ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಬೆಳ್ತಂಗಡಿ ತಾಲೂಕಿನ ಪೂಂಜಾಲಕಟ್ಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನವೆಂಬರ್ 14, 2026 ರಂದು ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ಖಾಸಗಿ ಸಂಸ್ಥೆಯೊಂದಕ್ಕೆ ಅಭಿನಂದನೆ ಸಲ್ಲಿಸುವ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಹರೀಶ್ ಪೂಂಜಾ ಅವರು ಮಾಡಿರುವ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ದೂರಿನಲ್ಲಿರುವ ಪ್ರಮುಖ ಆರೋಪಗಳು:
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, “ನಿಮ್ಮ ಶಾಲೆಗೆ ಒಂದು ರೂಪಾಯಿ ಸಹಾಯ ಮಾಡದ ದರಿದ್ರ ಪಾರ್ಟಿ ಕಾಂಗ್ರೆಸ್ ಬೆಳ್ತಂಗಡಿಯಲ್ಲಿದೆ. ಅವರು ದೂರು ಕೊಟ್ಟು ಇಲ್ಲಿಯ ಶಿಕ್ಷಕರಿಗೆ ಚಿತ್ರಹಿಂಸೆ ನೀಡಿ ಶಾಲೆಯ ಕಾರ್ಯಕ್ರಮ ಬದಲಿಸಿದ್ದಾರೆ. ಇಂತಹ ದರಿದ್ರ ಪಕ್ಷವನ್ನು ನಂಬಿ ಹೋಗಬೇಡಿ, ದೇಶ ಇರುವುದು ನರೇಂದ್ರ ಮೋದಿಯವರ ನೇತೃತ್ವದಲ್ಲಿ” ಎಂದು ರಾಜಕೀಯ ಪಕ್ಷವೊಂದರ ವಿರುದ್ಧ ಅವಹೇಳನಕಾರಿ ಹಾಗೂ ರಾಜಕೀಯ ಪ್ರೇರಿತ ಹೇಳಿಕೆ ನೀಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಭಾಷಣದ ಕೊನೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ನರೇಂದ್ರ ಮೋದಿ ಅವರಿಗೆ ಜಯಕಾರದ ಘೋಷಣೆಗಳನ್ನು ಕೂಗಿಸಲಾಗಿದೆ ಎಂದು ಆರೋಪಿಸಲಾಗಿದೆ.
ಶಾಲೆಯು ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಮತ್ತು ಉತ್ತಮ ನಾಗರಿಕ ಮೌಲ್ಯಗಳನ್ನು ಕಲಿಸಬೇಕಾದ ಪವಿತ್ರ ಸ್ಥಳವಾಗಿದ್ದು, ಯಾವುದೇ ರಾಜಕೀಯ ಪಕ್ಷದ ಪರ ಅಥವಾ ವಿರೋಧವಾಗಿ ಪ್ರಚಾರ ಮಾಡುವ ವೇದಿಕೆಯಲ್ಲ. ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳನ್ನು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಅವರ ಮೂಲಕ ಘೋಷಣೆ ಕೂಗಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಕಾನೂನಿಗೆ ವಿರುದ್ಧವಾಗಿದೆ.
ಮಕ್ಕಳಿಗೆ ರಾಜಕೀಯ ವಿಚಾರಗಳ ಬಗ್ಗೆ ಸ್ವತಂತ್ರವಾಗಿ ಯೋಚಿಸುವ ಮತ್ತು ಅಭಿಪ್ರಾಯ ರೂಪಿಸಿಕೊಳ್ಳುವ ಹಕ್ಕಿದ್ದು, ಅವರನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುವುದು ಅವರ ಶಿಕ್ಷಣದ ವಾತಾವರಣ ಹಾಗೂ ಮಕ್ಕಳ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಯುವ ಕಾಂಗ್ರೆಸ್ ಆಗ್ರಹ:
ಶಾಲಾ ಕಾರ್ಯಕ್ರಮದಲ್ಲಿ ಶಾಸಕರು ರಾಜಕೀಯ ಭಾಷಣ ಮಾಡಿರುವುದು ಹಾಗೂ ವಿದ್ಯಾರ್ಥಿಗಳಿಂದ ಘೋಷಣೆ ಕೂಗಿಸಿರುವುದು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ತಟಸ್ಥತೆ ಮತ್ತು ಘನತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದ್ದರಿಂದ ಈ ದೂರನ್ನು ಗಂಭೀರವಾಗಿ ಪರಿಗಣಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕೆಂದು ಬೆಳ್ತಂಗಡಿ ಯುವ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ನವೀನ್ ಕುಮಾರ್ ಕೆ ಅವರು ಮುಂಜಾಲಕಟ್ಟೆ ಆರಕ್ಷಕ ಠಾಣಾಧಿಕಾರಿಗಳಿಗೆ ನೀಡಿದ ದೂರಿನಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ಅಝರ್ ನಾವೂರು, ಹಾಗೂ ಜೋಶಿಲ್ ಲಾಯಿಲ, ನಜೀರ್ ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version