
ಬೆಳ್ತಂಗಡಿ: ಲಾಯಿಲ ಗ್ರಾಮದ ಅಗಳಿ ಎಂಬಲ್ಲಿ ಭಾನುವಾರ ಸಂಜೆ ಕಾರಿನಲ್ಲಿ ತೆರಳುತ್ತಿದ್ದ ಸವಾರನಿಗೆ ರಸ್ತೆ ಮಧ್ಯೆಯೇ ಚಿರತೆ ಎದುರಾದ ಘಟನೆ ನಡೆದಿದೆ.
ಅಗಳಿ ನಿವಾಸಿ ಚೇತನ್ ಹೆಬ್ಬಾರ್ ಅವರು ಭಾನುವಾರ ಸಂಜೆ ಬೆಳ್ತಂಗಡಿಯಿಂದ ತಮ್ಮ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ರಾತ್ರಿ ಸುಮಾರು 7.30ರ ವೇಳೆಗೆ ಮನೆ ಸಮೀಪದ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಏಕಾಏಕಿ ರಸ್ತೆ ಮಧ್ಯದಲ್ಲಿ ಚಿರತೆ ಕಾಣಿಸಿಕೊಂಡಿದೆ. ಕಾರಿನ ಬೆಳಕಿಗೆ ಚಿರತೆ ಗೋಚರಿಸಿದ್ದು, ಕೆಲಕಾಲ ಕಾರು ಸವಾರರಿಗೆ ಆತಂಕದ ಕ್ಷಣ ಎದುರಾಯಿತು. ಬಳಿಕ ಚಿರತೆ ಅಲ್ಲಿಂದ ತೆರಳಿದೆ ಎಂದು ತಿಳಿದುಬಂದಿದೆ.
ನಿರಂತರ ಚಿರತೆ ಓಡಾಟ
ಲಾಯಿಲ ಗ್ರಾಮದ ಅಗಳಿ ಪರಿಸರದಲ್ಲಿ ಕಳೆದ ಹಲವು ಸಮಯಗಳಿಂದ ಚಿರತೆ ಸಂಚಾರ ಕಂಡುಬರುತ್ತಿದೆ. ಆಗಾಗ್ಗೆ ರಾತ್ರಿ ವೇಳೆ ರಸ್ತೆ ಹಾಗೂ ಜನವಸತಿ ಪ್ರದೇಶಗಳ ಸಮೀಪ ಚಿರತೆ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಭಾಗದಲ್ಲಿ ಮನೆಗಳು, ಕೃಷಿ ತೋಟಗಳು ಹಾಗೂ ಸಂಪರ್ಕ ರಸ್ತೆಗಳಿದ್ದು, ರಾತ್ರಿ ಸಂಚರಿಸುವ ವಾಹನ ಸವಾರರು ಮತ್ತು ಪಾದಚಾರಿಗಳು ಭಯದಿಂದಲೇ ಓಡಾಡುವಂತಾಗಿದೆ.
ಚಿರತೆ ಓಡಾಟದಿಂದ ಸಾಕುಪ್ರಾಣಿಗಳ ಸುರಕ್ಷತೆಯ ಬಗ್ಗೆಯೂ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. ಜನವಸತಿ ಪ್ರದೇಶದ ಸಮೀಪವೇ ವನ್ಯಪ್ರಾಣಿ ಕಾಣಿಸಿಕೊಳ್ಳುತ್ತಿರುವುದರಿಂದ ಯಾವುದೇ ಅನಾಹುತ ಸಂಭವಿಸುವ ಮೊದಲು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆಯ ಚಲನವಲನದ ಬಗ್ಗೆ ಪರಿಶೀಲನೆ ನಡೆಸಬೇಕು. ಚಿರತೆಯ ಓಡಾಟದ ಬಗ್ಗೆ ಮಾಹಿತಿ ಸಂಗ್ರಹಿಸುವುದರ ಜತೆಗೆ ಜನರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.